ಇಂದು ಪೋಲಿಯೋ ಲಸಿಕೆ
ಚಿಕ್ಕಮಗಳೂರು: ಜಿಲ್ಲಾದ್ಯಂತ ಭಾನುವಾರ ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಆಸ್ಪತ್ರೆಯ (ಮೆಟರ್ನಿಟಿ ವಿಭಾಗ) ಆವರಣದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಮತ್ತು ರೋಟರಿ ಹಾಗೂ ಇತರೆ ಸಂಘ- ಸಂಸ್ಥೆಗಳ ಪದಾಧಿಕಾರಿಗಳಿಂದ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 1,03,748 ಇದ್ದು, ಬೇರೆ ಜಿಲ್ಲೆಯಿಂದ ನಗರ ಪ್ರದೇಶಕ್ಕೆ ವಲಸೆ ಬಂದಂತಹ ಮಕ್ಕಳ ಸಂಖ್ಯೆ- 1412, ಬೇರೆ ಜಿಲ್ಲೆಯಿಂದ ಗ್ರಾಮೀಣ ಪ್ರದೇಶಕ್ಕೆ ವಲಸೆ ಬಂದ ಮಕ್ಕಳ ಸಂಖ್ಯೆ- 6036. ಪಲ್ಸ್ ಪೋಲಿಯೋ ಹನಿ ಹಾಕಲು ಜಿಲ್ಲೆಯಲ್ಲಿ 975 ಬೂತ್ ಗಳನ್ನು ತೆರೆಯಲಾಗಿದ್ದು, ಇದರಲ್ಲಿ 861 ಸ್ಥಿತ ಬೂತುಗಳು, 44 ಟ್ರಾನ್ಸಿಟ್ ಬೂತುಗಳು ಹಾಗೂ ಮೊಬೈಲ್ ಬೂತುಗಳು- 70 ಇದ್ದು, ಬೂತುಗಳಲ್ಲಿ 3900 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ ಹಾಗೂ ಪಲ್ಸ್ ಪೋಲಿಯೋ ಬೂತುಗಳಲ್ಲಿ 216 ಮಂದಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ರೈತ ಸಂಘಟನೆಗೆ ಶೀಘ್ರ ಚಾಲನೆ
ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದಲ್ಲಿ ರೈತ ಸಂಘವನ್ನು ಸಂಘಟಿಸಬೇಕಾದ ಅನಿವಾರ್ಯತೆ ಉಂಟಾಗಿದ್ದು, ರೈತರ ಸಂಘಟನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಾಳೂರು ದಿಣ್ಣೆ ವಿನಾಯಕ ತಿಳಿಸಿದರು. ಶನಿವಾರ ಅಗ್ರಹಾರದ ಸುಬ್ಬಣ್ಣ ನಾಡಿಗ್ ಅವರ ಮನೆ ಆವರಣದಲ್ಲಿ ನಡೆದ ರೈತ ಸಂಘದ ಮುಖಂಡರ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೃಷಿಕರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಸರ್ಕಾರವು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದರು. 25ರಂದು ಸಭೆ: ಜ. 25 ರಂದು ಮತ್ತೆ ರೈತ ಮುಖಂಡರ ಸಭೆ ಕರೆಯಲು ತೀರ್ಮಾನಿಸಿದ್ದು, ಆ ಸಭೆಯಲ್ಲಿ ನರಸಿಂಹರಾಜಪುರ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ರೈತ ಸಂಘದ ಪದಾಧಿಕಾರಿಗಳು ರೈತ ಸಂಘದ ನಿಯಮಾವಳಿಗಳಿಗೆ ಬದ್ಧರಾಗಿರಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಪಿ.ಕೆ. ಬಸವರಾಜ್, ಜಿಲ್ಲಾ ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಕೆ. ಜಾನಕೀ ರಾಂ, ರೈತ ಮುಖಂಡ ಎಚ್.ಡಿ. ವಿನಯ, ರಂಗನಾಥ್ ಉಪಸ್ಥಿತರಿದ್ದರು.