ಒತ್ತುವರಿ ಜಮೀನು ಬಿಡಿಸಿಕೊಡಿ
ನರಸಿಂಹರಾಜಪುರ: ಕಸಬಾ ಹೋಬಳಿಯ ಬಾಳೆಕೊಪ್ಪದಲ್ಲಿ 6 ಪೌರ ಕಾರ್ಮಿಕರಿಗೆ ಮಂಜೂರಾದ ಒಟ್ಟು 12 ಎಕರೆ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಆ ಜಮೀನನ್ನು ಬಿಡಿಸಿಕೊಡಬೇಕು ಎಂದು ಪೌರ ಕಾರ್ಮಿಕರು ಸರ್ಕಾರವನ್ನು ಒತ್ತಾಯಿಸಿದರು. ಪೌರ ಕಾರ್ಮಿಕ ಹನುಮಂತಪ್ಪ, ದುರ್ಗಪ್ಪ, ತಿಪ್ಪೇಶ, ರಂಗಪ್ಪ, ರಾಮಪ್ಪ, ಲಕ್ಷ್ಮಣ ಎಂಬುವರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಅರ್ಪಿಸಿ, ಬಾಳೆಕೊಪ್ಪದಲ್ಲಿ 1984-85 ನೇ ಸಾಲಿನಲ್ಲಿ ತಲಾ 2 ಎಕರೆಯಂತೆ 6 ಜನರಿಗೆ 12 ಎಕರೆ ಮಂಜೂರಾಗಿತ್ತು. ಹಂಗಾಮಿ ಸಾಗುವಳಿ ಚೀಟಿಯೂ ಸಿಕ್ಕಿತ್ತು. ನಮಗೆ ಪಪಂನಲ್ಲಿ ಪೌರಕಾರ್ಮಿಕ ಕೆಲಸ ಸಿಕ್ಕಿದ್ದರಿಂದ ಕೆಲಸದ ಒತ್ತಡದ ನಡುವೆ ಜಮೀನಿನ ಕಡೆಗೆ ಹೋಗಲು ಸಾದ್ಯವಾಗಿರಲಿಲ್ಲ. ಈ ಸಂದರ್ಭ ಬಳಸಿಕೊಂಡ ಬಲಾಢ್ಯ ವ್ಯಕ್ತಿಗಳು ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಕಳೆದ ವರ್ಷವೂ ನಾವು ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರೂ, ಜಮೀನು ನಮ್ಮ ಸ್ವಾಧೀನಕ್ಕೆ ಬಂದಿಲ್ಲ. ಆದ್ದರಿಂದ ತಕ್ಷಣ ನಮ್ಮ ಜಮೀನನ್ನು ಬಿಡಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ