ದೇಹ, ಮನಸ್ಸು ಒಂದಾದರೆ ಏಕಾಗ್ರತೆ
ಚಿಕ್ಕಮಗಳೂರು: ದೇಶವು ಪ್ರಗತಿಯೆಂಬ ಶಿಖರವೇರಬೇಕಾದಲ್ಲಿ ಅದಕ್ಕೆ ದೇಶದ ಯುವಕರೆ ಮೆಟ್ಟಿಲಾಗಬೇಕು. ಯಾವುದರ ಮೇಲೂ ವ್ಯಾಮೋಹ ತೋರದೆ ಮುಕ್ತ ಜೀವಿಯಂತೆ ದುಡಿದಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಸುಗಮ ಸಂಗೀತ ಗಂಗಾದ ಕಾರ್ಯದರ್ಶಿ ಮಂಜುನಾಥ ಕಾಮತ್ ಹೇಳಿದ್ದಾರೆ. ನಗರದ ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾವಂತ ಯುವಕರು ಸಮಾಜದ ಏಳಿಗೆಯಲ್ಲಿ ಭಾಗವಹಿಸದಿರುವುದು ವಿಷಾದನೀಯ. ಹಾಗಾಗಿ ಸದಾ ಚಿಂತನಾಶೀಲರಾಗಿ, ತ್ಯಾಗ- ಸೇವೆಗಳಿಂದ ಸಮಾಜ ಕಟ್ಟಲು ಮುಂದಾಗಬೇಕೆಂದು ಕರೆ ನೀಡಿದರು.ಸಂಚಲನ: ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಮಾತನಾಡಿ, ಸ್ವಾಮಿ ವಿವೇಕಾನಂದರು ಕಡಿಮೆ ಸಮಯದಲ್ಲಿ ಸಂಚಲನ ಮೂಡಿಸಿದವರು. ಅವರು, ಒಂದು ಶಕ್ತಿ. ನಾವೆಲ್ಲರೂ ಅವರ ಮಾರ್ಗ ಅನುಸರಿಸುವುದು ಧರ್ಮ ಎಂದು ತಿಳಿಸಿದರು.ಶಾಲೆಯ ಕಾರ್ಯದರ್ಶಿ ಎಂ.ಎನ್. ಷಡಕ್ಷರಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಪ್ರಕಾಶ್, ಹಿರಿಯ ಶಿಕ್ಷಕ ಜೆ.ಎ. ಪ್ರಸಾದ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಬಿ.ಎನ್. ರಶ್ಮಿ ಸ್ವಾಗತಿಸಿದರು. ಸಹ ಶಿಕ್ಷಕಿ ಅಫ್ಸಾನಾ ಬಾನು ವಂದಿಸಿದರು.