ಪಠ್ಯೇತರದಿಂದ ವ್ಯಕ್ತಿತ್ವ ವಿಕಸನ
ಬಾಳೆಹೊನ್ನೂರು: ವಿದ್ಯಾರ್ಥಿಗಳಲ್ಲಿ ಪ್ರಮುಖವಾಗಿ ವ್ಯಕ್ತಿತ್ವ ವಿಕಸನವಾಗಬೇಕಿದ್ದು, ಇದಕ್ಕೆ ಅಗತ್ಯವಾಗಿ ಪಠ್ಯೇತರ ಚಟುವಟಿಕೆ ನಡೆಸಬೇಕು ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಕೆಎಂವೈ ಎಜುಕೇಷನ್ ಸೊಸೈಟಿಯ ಹೋಲಿ ಪ್ರಾಫೆಟ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಉಂಟು ಮಾಡಿ ಸಾಮರಸ್ಯ ಮೂಡಿಸುವುದೇ ಶಿಕ್ಷಣವಾಗಿದೆ. ಅಕ್ಷರಾಭ್ಯಾಸ ಮಾಡಿದವರೆಲ್ಲ ವಿದ್ಯಾವಂತರಾಗುವುದಿಲ್ಲ. ವಿದ್ಯಾವಂತರಾದವರೆಲ್ಲ ಅಕ್ಷರಾಭ್ಯಾಸ ಮಾಡಿರುವುದಿಲ್ಲ ಎಂದ ಅವರು, ಗೌರವಾನ್ವಿತ ಶಿಕ್ಷಕರಿಗೆ ತನ್ನ ವಿದ್ಯಾರ್ಥಿಯು ಉನ್ನತ ಹುದ್ದೆಗೇರಬೇಕೆಂಬ ಬಯಕೆ ಇರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಸಂಸ್ಕಾರ: ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕೋರ್ಸ್ ಅಥವಾ ಶಿಕ್ಷಣಕ್ಕೆ ತಮ್ಮ ಪೋಷಕರು ಸೇರ್ಪಡೆಗೊಳಿಸಬೇಕು. ಒತ್ತಡ ಹೇರಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಬಾರದು. ಶಿಕ್ಷಣವೆಂಬುದು ಶಾಲೆಯಲ್ಲಿ ದೊರೆತರೆ ಸಂಸ್ಕಾರವೆಂಬ ವಿದ್ಯೆ ಮನೆಯಲ್ಲಿ ದೊರೆಯುತ್ತದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ಹಾದಿಗೆ ಶಿಕ್ಷಣ ಸಂಸ್ಥೆಗಳು ಶ್ರಮಿಸಲಿ ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗ ನಮ್ಮ ಮುಂದಿದ್ದು, ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಿಸಲು ಶಾಲಾ ವಾರ್ಷಿಕೋತ್ಸವಗಳು ಸಹಕಾರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುತ್ತಿವೆ ಎಂದು ಹೇಳಿದರು.
ಕೆಎಂವೈ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಕೆ. ನಿಸಾರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ, ತಾಪಂ ಮಾಜಿ ಅಧ್ಯಕ್ಷ ಸಿ.ಕೆ. ಜಿನ್ನಪ್ಪ, ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಶಹಾಬ್, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ. ಗೋವಿಂದೇಗೌಡ, ಸದಸ್ಯ ಇಬ್ರಾಹಿಂ ಶಾಫಿ, ಶಾಲಾ ಸಮಿತಿಯ ಸದಸ್ಯರಾದ ಅಬ್ದುಲ್ ರಜಾಕ್, ಟಿ.ಎಂ. ನಾಸಿರ್, ಎಸ್.ಎಂ. ಸರ್ತಾಜ್, ಡಿ.ಎ. ಲೋಬೋ, ಪ್ರಾಚಾರ್ಯ ಕೆ. ನವಾಜ್ ಅಹ್ಮದ್ ಉಪಸ್ಥಿತರಿದ್ದರು.