ಸಹಕಾರ, ಪ್ರೇರಣೆಗೆ ಕಲಿಕೋತ್ಸವ ಸಹಕಾರಿ
ಚಿಕ್ಕಮಗಳೂರು: ಕಲಿಕೋತ್ಸವವು ಕಲಿಕೆಯ ಆಕರ್ಷಣೆಗೆ ಹಾಗೂ ಪ್ರತಿಭೆ ಗುರುತಿಸುವಿಕೆಗೆ ಒಂದು ವೇದಿಕೆಯಲ್ಲದೆ ಉತ್ತಮ ಕಲಿಕೆಯ ಪರಿಸರ ನಿರ್ಮಾಣಕ್ಕೂ ಕಾರಣವಾಗಿದೆ ಎಂದು ತಹಸೀಲ್ದಾರ್ ಶಿವೇಗೌಡ ಹೇಳಿದ್ದಾರೆ.
ನಗರದ ಟಿಎಂಎಸ್ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಚಿಕ್ಕಮಗಳೂರು ತಾಲೂಕು ಮಟ್ಟದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಂಡಿಸಿ ಕಲಿಸುವುದಕ್ಕಿಂತ ಮಕ್ಕಳಿಗೆ ಇಷ್ಟವಾಗುವ ವಾತಾವರಣ ಸೃಷ್ಟಿಸಿ ಕಲಿಸಬೇಕೆಂದರು.
ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಹೊಂದಾಣಿಕೆ, ಸಹಕಾರ, ಸಹಬಾಳ್ವೆ ಗುಣ ಪ್ರೇರೇಪಿಸುತ್ತವಲ್ಲದೆ ಏನಾದರೂ ಹಾಗೂ ಮೊದಲು ಮಾನವನಾಗು ಎಂಬ ನುಡಿಗೆ ಹತ್ತಿರವಾಗಬೇಕೆಂದ ಅವರು, ಪ್ರತಿ ಮಗುವಿನ ಪ್ರತಿಭೆಗೆ ಎಲ್ಲರೂ ಅವಕಾಶ ನೀಡಿ ಎಂದು ಆಶಯ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯು ಈ ಶೈಕ್ಷಣಿಕ ವರ್ಷದಿಂದ ವಿನೂತನವಾಗಿ ತಂದಿರುವ ಕಲಿಕೆಯ ವಿಷಯಗಳಿಗೆ ಸಂಬಂಧಿಸಿದ ವಿವಿಧ ಬಗೆಯ ಸಾಮರ್ಥ್ಯ ವಿಕಾಸ, ಅಭಿವ್ಯಕ್ತಿಗೆ ಸೂಕ್ತ ವೇದಿಕೆ, ಸ್ಪಷ್ಟ ಓದು-ಶುದ್ಧ ಬರಹ, ಬಾಯ್ದೆರೆ ಲೆಕ್ಕ, ಸೂತ್ರ ಸಂಕೇತ, ಅಳತೆ ತೂಕಗಳ ಅನ್ವಯ ಇತ್ಯಾದಿ ಅಂಶಗಳನ್ನು ಓರೆ ಹಚ್ಚಿ ಯಾವ ಶಾಲೆ ಯಾವ ಸ್ಥರದಲ್ಲಿದೆ ಅಥವಾ ಮಕ್ಕಳ ಕಲಿಕೆಗೆ ಹೇಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬುದನ್ನು ಶಾಲಾ, ಕ್ಲಸ್ಟರ್ ಹಾಗೂ ತಾಲೂಕು ಹಂತಗಳಲ್ಲಿ ಗುರುತಿಸಿ ಎಲ್ಲಾ ಮಕ್ಕಳನ್ನು ಪ್ರೋತ್ಸಾಹಿಸುವ, ಅಭಿನಂದಿಸುವ ಕಾರ್ಯಕ್ರಮವಾಗಿದೆ ಎಂದರು.
ಟಿಎಂಎಸ್ ಸಂಸ್ಥೆಯ ಕಾರ್ಯದರ್ಶಿ ಗೀತಾ ಮೂರ್ತಿ ಮಾತನಾಡಿ, ಶಿಕ್ಷಕರು ತರಗತಿಯ ಸಂತಸದ ಕಲಿಕೆಗೆ ಆದ್ಯತೆ ನೀಡುತ್ತಾ ಪ್ರತಿಭೆಗೆ ಅವಕಾಶ ನೀಡುವ ಜತೆಗೆ ಇಂತಹ ಕಲಿಕೋತ್ಸವಗಳಲ್ಲಿ ಇನ್ನಷ್ಟು ಪ್ರೋತ್ಸಾಹಿಸುವ ತಮ್ಮ ಹಾಗೂ ಇಲಾಖೆಯ ಕಳಕಳಿಗೆ ಪ್ರಶಂಸೆಯ ಅಭಿಪ್ರಾಯ ವ್ಯಕ್ತಪಡಿಸುತ್ತಾ ಮಕ್ಕಳಿಗೆ, ತೀರ್ಪುಗಾರರಿಗೆ ಹಾಗೂ ಶಿಕ್ಷಕರಿಗೆ ಯಶಸ್ಸನ್ನು ಕೋರಿದರು.
ಹೊರೆ ಕಡಿಮೆಯಾಗಲಿ: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ದೇವರಾಜಪ್ಪ ಮಾತನಾಡಿ, ಶಿಕ್ಷಕರಿಗೆ ಇತರೆ ಕಾರ್ಯಭಾರಗಳ ಜತೆಗೆ ಕಲಿಕೆ ಕುರಿತು ನಡೆಸುವ ಈ ಸ್ಪರ್ಧೆಗಳು ವಿಶೇಷವಾದವುಗಳು ಎಂದರಲ್ಲದೆ, ಶಿಕ್ಷಕರಿಗೆ ಇತರೆ ಕಾರ್ಯಗಳ ಹೊರೆ ಕಡಿಮೆಯಾಗಬೇಕು ಎಂದು ಹೇಳಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್. ಸುಂದರೇಶ್ ಮಾತನಾಡಿ, ಶಿಕ್ಷಕರು ಯಾವುದೇ ಕೆಲಸಗಳನ್ನು ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರೆಂಬ ಕಾರಣಕ್ಕಾಗಿ ಹಾಗೂ ಅನ್ಯ ಕಾರ್ಯಗಳಿಗೆ ಒಗ್ಗಿಕೊಳ್ಳಬಲ್ಲರೆಂಬ ತಿಳಿವಳಿಕೆಯಿಂದಲೇ ಏನೋ ನಮಗೆ ಹಲವು ಕಾರ್ಯ ಒತ್ತಡಗಳು ಹೆಚ್ಚಾಗುತ್ತವೆಂದರಲ್ಲದೆ ಪಠ್ಯ ಕಲಿಸುವ ಬೋಧಿಸುವ ಕ್ರಿಯೆಗೆ ಹೆಚ್ಚು ಸಮಯ ಬಿಡಬೇಕೆಂದು ಇತರೆ ಇಲಾಖೆಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಕೇಳಿಕೊಂಡರು. ಕಾರ್ಯಕ್ರಮದಲ್ಲಿ ನಾವು ನಮ್ಮ ದಿನನಿತ್ಯದ ಕಲಿಕೆಯ ಪಠ್ಯ ಭಾಗದ ಕಾರ್ಯಕ್ರಮ ಇದಾಗಿರುವುದರಿಂದ ಇನ್ನಷ್ಟು ಸಕ್ರಿಯವಾಗಿ ಭಾಗವಹಿಸಿದ್ದೇವೆಂದು ತಿಳಿಸಿದರು.
ಡಯಟ್ನ ಹಿರಿಯ ಉಪನ್ಯಾಸಕ ಶ್ರೀಕಂಠೇಶ್ವರ ಮಾತನಾಡಿ, ಪಠ್ಯ ಕಲಿಕೆಯ ಜತೆಗೆ ಗುರು, ಗುರಿ ಎರಡೂ ಮುಖ್ಯವಾಗಬೇಕು ಎಂದರು.
ಗುಣಾತ್ಮಕ ಕಲಿಕೆ: ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಬಿ. ರಾಜಪ್ಪ, ಈ ಕಲಿಕೋತ್ಸವವು ದಿನನಿತ್ಯ ಕಲಿಕಾ ಸಂದರ್ಭದ ನಿತ್ಯೋತ್ಸವವಾಗಲಿ, ಈ ಕಾರ್ಯಕ್ರಮದ 30 ವಿವಿಧ ಪಠ್ಯ ವಿಷಯ ಗುಣಾತ್ಮಕ ಕಲಿಕೆಗೆ ಪೂರಕವಾಗಲಿ ಎಂದು ಹೇಳಿದರು.
ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.