ಅಕ್ರಮ ಚಟುವಟಿಕೆ ತಾಣವಾದ ಜೈಲು ಜಾಗ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜ.20
ನಗರದ ಹೃದಯ ಭಾಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿ ಕಳೆದ 6 ವರ್ಷಗಳಿಂದ ಪಾಳು ಬಿದ್ದಿರುವ ಕಾರಾಗೃಹದ ಜಾಗ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕುಡುಕರು ಓಪನ್ ವೈನ್ ಸ್ಟೋರನ್ನಾಗಿ ಬಳಕೆ ಮಾಡುತ್ತಿದ್ದಾರೆ. ಈ ವಾಸ್ತವಿಕತೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ?
ಹೀಗೆಂದು ಸಾರ್ವಜನಿಕರು ಜಿಲ್ಲಾಡಳಿತದತ್ತ ಪ್ರಶ್ನೆ ಒಗೆದಿದ್ದಾರೆ.
ಇಲ್ಲಿನ ಕೆ.ಎಂ. ರಸ್ತೆಯಲ್ಲಿದ್ದ ಕಾರಾಗೃಹವನ್ನು ರತ್ನಗಿರಿ ಬೋರೆ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಇದು, ಕಳೆದ 6 ವರ್ಷದ ಕತೆ. ಅಂದಿನಿಂದ ಈವರೆಗೆ ಈ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸುವ ಕೆಲಸ ಜಿಲ್ಲಾಡಳಿತದಿಂದ ಆಗಿಲ್ಲ. ಈ ಜಾಗ ಬಯಲು ಮಲ ವಿಸರ್ಜನೆಗೆ, ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಇಷ್ಟೇ ಅಲ್ಲಾ ಹಗಲು ರಾತ್ರಿ ಈ ಜಾಗದಲ್ಲಿ ಕುಡುಕರು ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ.
ಹಲವೆಡೆ ಬಿದ್ದಿರುವ ಖಾಲಿ ಮದ್ಯದ ಬಾಟಲಿಗಳು, ಪಾಕೇಟ್‌ಗಳು ಈ ಕೃತ್ಯ ನಿರಂತರತೆಗೆ ಸಾಕ್ಷಿಯಾಗಿವೆ. ಕೆಲವು ವೈನ್‌ಸ್ಟೋರ್‌ಗಳು ಈ ಜಾಗವನ್ನು ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಬಳಕೆ ಮಾಡಿಕೊಳ್ಳುತ್ತಿವೆ. ತಮ್ಮ ಸ್ಟೋರ್‌ನಲ್ಲಿ ಬಿದ್ದಿರುವ ಖಾಲಿ ಮದ್ಯದ ಪಾಕೇಟ್‌ಗಳು, ಮೊಟ್ಟೆಗಳನ್ನು ತಂದು ಈ ಜಾಗದಲ್ಲಿ ಬಿಸಾಕುತ್ತಿದ್ದಾರೆ.
ಬಳಕೆ ಆಗುತ್ತಿಲ್ಲ: ಇಲ್ಲಿ ಮಲ ವಿಸರ್ಜನೆ ಮಾಡುತ್ತಿರುವುದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಸಮೀಪದಲ್ಲೇ ಪ್ರವಾಸಿ ಟ್ಯಾಕ್ಸಿ ಸ್ಟ್ಯಾಂಡ್, ಗೂಡ್ಸ್ ಆಟೋ ಸ್ಟ್ಯಾಂಡ್ ಗಳಿದ್ದು, ಇಲ್ಲಿ ವಾಹನ ಚಾಲಕರು ತಮ್ಮ ವಾಹನಗಳನ್ನು ನಿಲ್ಲಿಸಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ನಗರದ ಹೃದಯ ಭಾಗದಲ್ಲಿ ಸುಮಾರು 1 ಎಕರೆ ಜಾಗ ಪಾಳು ಬಿಡುವುದರ ಬದಲು ಜಿಲ್ಲಾಡಳಿತ ಈ ಜಾಗವನ್ನು ವಶಕ್ಕೆ ತೆಗೆದುಕೊಂಡು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ. ಸದ್ಯ ಈ ಜಾಗ ಕಾರಾಗೃಹ ಇಲಾಖೆ ಸ್ವಾಧೀನದಲ್ಲಿದೆ. ಅದನ್ನು ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಈವರೆಗೆ ಮಾಡಿಲ್ಲ.
ಜಿಲ್ಲಾಡಳಿತ ಈ ಜಾಗವನ್ನು ವಶಕ್ಕೆ ತೆಗೆದುಕೊಂಡು, ಅಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತೆಗೆದು ಹಾಕಿ, ತಂತಿ ಬೇಲಿ ಹಾಕಿದರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಸಾಧ್ಯ. ನಗರದ ಸೌಂದರ್ಯ ದೃಷ್ಟಿಯಿಂದ ಹಾಗೂ ಆ ಪ್ರದೇಶದಲ್ಲಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕಾದ ಅವಶ್ಯಕತೆ ಇದೆ ಎಂಬುದು ಸಾರ್ವಜನಿಕರ ಒತ್ತಾಯ ಆಗ್ರಹ.