ಆದಿಶ್ರೀ ಪುಣ್ಯಾರಾಧನೆ
ಚಿಕ್ಕಮಗಳೂರು: ಇಂದಿನ ಪೀಳಿಗೆ ಸಂತರು ಮತ್ತು ಮಹಾಪುರುಷರ ಹಾದಿಯಲ್ಲಿ ಸಾಗಿದಾಗ ಮಾತ್ರ ದೇಶದ ಸಂಸ್ಕೃತಿ ಮತ್ತು ಪರಂಪರೆ ಉಳಿಯುತ್ತವೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್. ಸಣ್ಣಸಿದ್ದೇಗೌಡ ಹೇಳಿದ್ದಾರೆ. ನಗರದ ಶ್ರೀಕಾಮಧೇನು ಗಣಪತಿ ಕ್ಷೇತ್ರದಲ್ಲಿ ಭಾನುವಾರ ಸಂಜೆ ನಡೆದ ಆದಿಚುಂಚನಗಿರಿ ಮಹಾಸಂಸ್ಥಾನದ ಹಿಂದಿನ ಗುರುವರ್ಯ ಶ್ರೀ ಬಾಲಗಂಗಾದರನಾಥ ಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಶಂಕರಾಚಾರ್ಯರು, ಸೇರಿದಂತೆ ಅನೇಕ ಸಂತರು ಮತ್ತು ಮಹಾತ್ಮರು ದೇಶದ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಪೀಳಿಗೆಯ ಜನ ಅದನ್ನು ಬದಿಗೊತ್ತಿ ಪಾಶ್ಚಾತ್ಯ ಸಂಸ್ಕೃತಿಗೆ ದಾಸರಾಗಿರುವ ಕಾರಣ ರಾಷ್ಟ್ರದಲ್ಲಿ ವೃದ್ಧಾಶ್ರಮದಂತಹ ಸಂಸ್ಕೃತಿ ತಲೆ ಎತ್ತಿವೆ ಎಂದು ವಿಷಾಧಿಸಿದರು. ಸಂತರು ಮತ್ತು ಮಹಾತ್ಮರು ಪೋಷಿಸಿ ಬೆಳೆಸಿರುವ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದ್ದು ಆ ಹೊಣೆಗಾರಿಕೆಯನ್ನು ಯುವ ಜನತೆ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಬದುಕು ಮತ್ತು ಅವರ ಆದರ್ಶ ಇಂದಿನ ಯುವ ಜನತೆಗೆ ಮಾದರಿಯಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್. ನಂಜುಂಡಸ್ವಾಮಿ, ಕಳೆದ ಹತ್ತು ವರ್ಷಗಳಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟುಹಬ್ಬವನ್ನು ಕ್ಷೇತ್ರದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಸ್ವಾಮೀಜಿಯವರ ಪುಣ್ಯಸ್ಮರಣೆ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷ ಪೂಜೆ ಜರುಗಿತು. ವಾಣಿ ಚಂದ್ರಯ್ಯ ನಾಯ್ಡು, ಟ್ರಸ್ಟಿ ಟಿ.ಆರ್. ಲಕ್ಷ್ಮಣರಾಜು, ಕಲಾ ಸೇವಾ ಸಂಘದ ಕೆ. ಮೋಹನ್ ಇದ್ದರು.