ಕಾಡಾನೆ ದಾಳಿಗೆ ಬಾಳೆ ತೋಟ ನಾಶ
ಚಿಕ್ಕಮಗಳೂರು: ತಾಲೂಕಿನ ಚಂದ್ರಗೆರೆ ಗ್ರಾಮದ ಸಮೀಪದಲ್ಲಿ ಎರಡು ಕಾಡಾನೆಗಳು ಬಾಳೆ, ತೆಂಗು ಸೇರಿದಂತೆ ಇತರೆ ಬೆಳೆಗಳನ್ನು ಸೋಮವಾರ ರಾತ್ರಿ ಹಾಳು ಮಾಡಿದೆ. ಇದರಿಂದಾಗಿ ಚಂದ್ರಗೆರೆ, ಹಿರೇಗೌಜ ಸೇರಿದಂತೆ ಆಸುಪಾಸಿನ ಜನರಲ್ಲಿ ಆತಂಕ ಮೂಡಿದೆ.
ಸೋಮವಾರ ರಾತ್ರಿ ಬಂದಿರುವ ಕಾಡಾನೆಗಳು ತಮ್ಮೇಗೌಡ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ತೆಂಗು, ಅಡಿಕೆ ಬೆಳೆಗಳನ್ನು ಹಾಳು ಮಾಡಿರುವುದರಲ್ಲದೆ, ತೋಟದಲ್ಲಿದ್ದ ಹಾನಿ ನೀರಾವರಿಯ ಸಂಪರ್ಕವನ್ನು ಹಾಳು ಮಾಡಿವೆ. ಇದರ ಜತೆಗೆ ಜೋಳ, ಜಾನುವಾರುಗಳ ಮೇವುಗಳನ್ನು ತುಳಿದು ನಾಶ ಪಡಿಸಿವೆ. ಸುಮಾರು ಒಂದು ಲಕ್ಷ ರು.ಗಳಷ್ಟು ಹಾನಿಯಾಗಿದೆ.
ಚಿಕ್ಕಮಗಳೂರಿನಿಂದ ಸುಮಾರು 15 ಕಿ.ಮೀ. ದೂರದಲ್ಲಿ ಚುರ್ಚೆಗುಡ್ಡ, ಸಿದ್ದೇಶ್ವರ ಬೆಟ್ಟ ಇದ್ದು, ಇದು ಅರೇಮಲೆನಾಡು ಪ್ರದೇಶ, ಕಳೆದ ವರ್ಷವೂ ಸಹ ಇಲ್ಲಿಗೆ ಸಮೀಪದ ಹಿರೇಗೌಜ ಗ್ರಾಮಕ್ಕೆ ಕಾಡಾನೆ ಬಂದಿತ್ತು. ಈ ಬಾರಿ ಎರಡು ಕಾಡಾನೆಗಳು ಬಂದಿದ್ದು, ಚಂದ್ರಗೆರೆ ಗ್ರಾಮದ ಕೆರೆಯಲ್ಲಿರುವ ನೀರನ್ನು ಕುಡಿಯಲು ಅವುಗಳು ಬಂದಿರಬಹುದೆಂದು ಗ್ರಾಮಸ್ಥರು ಹೇಳಿದ್ದಾರೆ.
ಕಾಡಾನೆ ಬಂದು ಹೋಗಿರುವ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಶಿಧರ್ ಆಗ್ರಹಿಸಿದ್ದಾರೆ.