ಮೂಲ ಕಸುಬಿನಿಂದ ಸಮಾಜದಲ್ಲಿ ಸಮತೋಲನ
ಕನ್ನಡಪ್ರಭ ವಾರ್ತೆ, ತರೀಕೆರೆ, ಜ.21
ಜನಾಂಗದ ಮೂಲ ಕಸುಬನ್ನು ಅನುಸರಿಸಲು ಮುಂದಾದಾಗ ಮಾತ್ರ ಸಮಾಜದಲ್ಲಿ ಸಮತೋಲನ ಮತ್ತು ಆರ್ಥಿಕ ಸಾಮಾಜಿಕ ದೃಢತೆ ಸಾಧ್ಯ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ಜಿಲ್ಲೆ ವತಿಯಿಂದ ಪಟ್ಟಣದ ಕನಕ ಕಲಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಚೌಡಯ್ಯ ಅವರು ಗಂಗಮತಕ್ಕೆ ಸೇರಿದ್ದು, ಗಂಗಾ ಮತಸ್ಥರ ಮೂಲ ಉದ್ಯೋಗ ಮೀನುಗಾರಿಕೆ. ಆದರೆ ಆ ಜನಾಂಗ ಇಂದು ಮೂಲ ಕಸುಬಿನಿಂದ ವಿಮುಖರಾಗಿ ದೂರ ಉಳಿಯುತ್ತಿರುವುದು ವಿಷಾದಕರ. ಮತ್ಸ ಉದ್ಯಮ ಇಂದು ಲಾಭದಾಯಕ ಉದ್ಯಮವಾಗಿದ್ದು, ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಪಡೆದು ಶಿಕ್ಷಿತರಾಗಿ, ಮೂಲ ಕಸುಬನ್ನು ತಮ್ಮದಾಗಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಸಂಶೋಧನೆಯ ಅಗತ್ಯ: ಉಪವಿಭಾಗಾಧಿಕಾರಿ ಜಿ. ಅನುರಾಧ ಮಾತನಾಡಿ, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಸದೃಢತೆ ಅಡಗಿದೆ. ಅವರ ವಿಚಾರಧಾರೆಗಳು ಸಾಮಾಜಿಕ ಮತ್ತು ಜೀವನ ಶೈಲಿಯ ಪರಿವರ್ತನೆಗೆ ದಾರಿದೀಪ ಇದ್ದಂತೆ. ಚೌಡಯ್ಯನವರ ಕೃತಿ ಮತ್ತು ವಚನಗಳನ್ನು ಕುರಿತಂತೆ ಇನ್ನೂ ಸಾಕಷ್ಟು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಿಮ್ಮಯ್ಯ ಅವರು, ಚೌಡಯ್ಯ ಅವರನ್ನು ಕುರಿತು ಉಪನ್ಯಾಸ ನೀಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯದಲ್ಲಿ ತೊಡಗಿದ ಸಂತ. ಕಾಯಕದ ಮೂಲಕ ನಿಷ್ಠೆ ಮತ್ತು ತಮ್ಮ ತಮ್ಮಗಳ ವೃತ್ತಿಯನ್ನು ಪ್ರೀತಿಸುವಂತೆ ಸಂದೇಶ ನೀಡಿದ ಅದಮ್ಯ ಚೇತನ ಎಂದು ನುಡಿದರು.
ಹಿರಿಯೂರು ಮಠದ ಶಿವಕುಮಾರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಸಮಾಜದ ಮುಖಂಡರಾದ ಯಲ್ಲಪ್ಪ, ರಾಜಶೇಖರ್, ಪಂಚಾಯಿತಿ ಸದಸ್ಯರು, ಪುರಸಭೆ ಸದಸ್ಯರು, ತಾ.ಪಂ.ಅಧ್ಯಕ್ಷೆ ಶಕುಂತಲ ನಾಗರಾಜ್, ಪುರಸಭಾ ಮಾಜಿ ಅಧ್ಯಕ್ಷ ನಾಗರಾಜ್, ಉಪ ನೋಂದಣಾಧಿಕಾರಿ ಭಾಗ್ಯಲಕ್ಷ್ಮಿ, ಇಒ ದೇವರಾಜಪ್ಪ ಮತ್ತಿತರರು ಇದ್ದರು.