ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಂಗಭೂಮಿಯಿಂದ ಸಮಾಜಕ್ಕೆ ಉತ್ತಮ ಮಾರ್ಗದರ್ಶನ

Mainashree
Updated On : 22 Jan 2014, 12:15 pm

ತರೀಕೆರೆ: ರಂಗಭೂಮಿಯಿಂದ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ ಎಂದು ಮಾಜಿ ಶಾಸಕ ಡಿ.ಎಸ್. ಸುರೇಶ್ ತಿಳಿಸಿದ್ದಾರೆ.
ಮಂಗಳವಾರ ಶಿವಕುಮಾರ ಕಲಾ ಸಂಘ ಸಾಣೆಹಳ್ಳಿ ವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಶಿವಸಂಚಾರ ನಾಟಕೋತ್ಸವ ರಂಗ ಮಂಥನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವ ಸಂಚಾರ ನಾಟಕಗಳಲ್ಲಿ ಡಾ. ಪಂಡಿತಾರಾಧ್ಯರು ಒಂದು ವಿನೂತನವಾದ ಸಾಧನೆ ಮತ್ತು ಹೊಸ ಪ್ರಯೋಗ ನಿರ್ವಹಿಸಿದ್ದಾರೆ. ಶಿವಸಂಚಾರ ನಾಟಕಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದು ಇದುವರೆಗೂ ಸುಮಾರು ಎರಡೂವರೆ ಸಾವಿರ ಪ್ರದರ್ಶನ ಕಂಡಿದೆ. ಎಲ್ಲರ ಸಹಕಾರದಿಂದ ತರೀಕರೆಯಲ್ಲಿ ನಿರಂತರವಾಗಿ ಶಿವಸಂಚಾರ ನಾಟಕೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಕಲಾಭಿಮಾನಿಗಳಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ ಎಂದು ತಿಳಿಸಿದರು.
ಪ್ರೇರಕರು: ನಾಲ್ಕು ದಿನಗಳ ಕಾಲ ಪಟ್ಟಣದಲ್ಲಿ ನಾಟಕೋತ್ಸವ ನಡೆಯಲಿದ್ದು, ಕಲಾಭಿಮಾನಿಗಳು ಮತ್ತು ಪ್ರೇಕ್ಷಕರೆ ಕಲಾವಿದರಿಗೆ ಪ್ರೇರಕರು ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಶಂಭೈನೂರು ಆನಂದಪ್ಪ ಅವರು ನಾಟಕೋತ್ಸವದ ಉದ್ಘಾಟಿಸಿ ಬಳಿಕ ಮಾತನಾಡಿ, ಸಿರಿಗೆರೆ ಡಾ.ಪಂಡಿತಾರಾಧ್ಯ ಸ್ವಾಮೀಜಿ ಅವರು ನಾಟಕಗಳ ಮೂಲಕ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಮಹತ್ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಮಾತನಾಡಿ, ನಾಟಕಗಳು ತಮ್ಮದೇ ಆದ ಪ್ರಭಾವ ಬೀರುತ್ತದೆ. ನಾಟಕ ವೀಕ್ಷಣೆಯಿಂದ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಭಾಷೆ ಬೆಳೆಯಲು ಸಹಾಯಕವಾಗುತ್ತದೆ. ಜತೆಗೆ ಸಕಾರಾತ್ಮಕ ಬೆಳವಣಿಗೆಗೆ ಅನುಕೂಲ ಎಂದು ತಿಳಿಸಿದರು.
ಜಿಪಂ ಸದಸ್ಯ ಕೆ.ಆರ್. ಆನಂದಪ್ಪ, ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ರೇವಣ್ಣ, ಹಿರಿಯ ರಂಗಭೂಮಿ ಕಲಾವಿದ ಬೇಲೇನಹಳ್ಳಿ ಸೋಮಶೇಖರ್, ನಾಗರಾಜ್ ಮತ್ತಿತರರು ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಶಿವಕುಮಾರ್, ತಾಪಂ ಮಾಜಿ ಸದಸ್ಯ ಲೋಕೇಶ್, ಚವ್ಹಾಣ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಸಿ.ಆರ್. ಪರಮೇಶ್ವರಪ್ಪ, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು. ಡಾ. ರಾಜಶೇಖರ ಹನಮಲಿ ಅವರು ರಚಿಸಿದ ಮಹಾ ಬೆಳಗು ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement