ಜೆಡಿಎಸ್ 'ಆಪರೇಷನ್' ಮಾಡಲ್ಲ: ದತ್ತ
ಕಡೂರು: ಬಿಜೆಪಿಯಲ್ಲಿ ಕೆಜೆಪಿ ವಿಲೀನವಾಗಿ ವಿರೋಧ ಪಕ್ಷದ ಸ್ಥಾನಕ್ಕೆ ಚ್ಯುತಿ ಬಂದಲ್ಲಿ ವಿರೋಧ ಪಕ್ಷದ ಸ್ಥಾನಮಾನದ ಅಧಿಕಾರಕ್ಕಾಗಲಿ ಜೆಡಿಎಸ್ ಬಿಜೆಪಿಯಂತೆ ಶಾಸಕರನ್ನು ಸೆಳೆಯುವ ಆಪರೇಷನ್ಗೆ ಮುಂದಾಗುವುದಿಲ್ಲ ಎಂದು ಶಾಸಕ, ವಿರೋಧ ಪಕ್ಷದ ಉಪ ನಾಯಕ ವೈಎಸ್ವಿ ದತ್ತ ಹೇಳಿದರು.
ಕೆಜೆಪಿ ಬಿಜೆಪಿಯೊಂದಿಗೆ ವಿಲೀನವಾದಲ್ಲಿ ಜೆಡಿಎಸ್ ಯಾವ ಸ್ಥಾನಮಾನಕ್ಕೂ ಆಸೆಪಡದೆ ವಿಧಾನಸಭೆಯ ಒಳಗೂ- ಹೊರಗೂ ಸಮರ್ಥ ವಿರೋಧ ಪಕ್ಷವಾಗಿ ಹೋರಾಟ ಮಾಡುತ್ತದೆಯೇ ಹೊರತು ವಿರೋಧ ಪಕ್ಷದ ಸ್ಥಾನ ಹೋಗಲಿದೆ ಎಂಬ ಭೀತಿ ಜೆಡಿಎಸ್ ಪಕ್ಷಕ್ಕಾಗಲೀ ಮುಖಂಡರಿಗಾಗಲಿ ಇಲ್ಲ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ಷೇತ್ರದಿಂದ ತಲಾ ಮೂವರು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆಯನ್ನು 2013ರ ಮೇನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಜೆಡಿಎಸ್ ಹೆಚ್ಚು ಮತ ಗಳಿಸಿದೆ ಎಂಬ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗೆ ಆದ್ಯತೆ ನೀಡಿ ಟಿಕೆಟ್ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಂ. ಮಹೇಶ್ವರಪ್ಪ, ಎನ್. ಇಮಾಮ್, ಜಿಗಣೇಹಳ್ಳಿ ನೀಲಂಕಠಪ್ಪ, ಮಹೇಶ್ ಇದ್ದರು.