ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತರೀಕೆರೆ ತಾಲೂಕು ನೀರಾವರಿಗೊಳಪಡಿಸಿ

Mainashree
Updated On : 23 Jan 2014, 12:27 pm

ಕನ್ನಡಪ್ರಭ ವಾರ್ತೆ  ತರೀಕೆರೆ  ಜ.22
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ, ಭದ್ರಾ ಜಲಾಶಯದಿಂದ ತರೀಕೆರೆ ತಾಲೂಕನ್ನು ಸಂಪೂರ್ಣ ನೀರಾವರಿಗೊಳಿಸಲು ಮತ್ತು ಕುಡಿಯುವ ನೀರು ಒದಗಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಸ್ವಯಂಪ್ರೇರಿತ ಅಜ್ಜಂಪುರ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಅಜ್ಜಂಪುರ ಪಟ್ಟಣದ ಎಲ್ಲ ಅಂಗಡಿ- ಮುಂಗಟ್ಟುಗಳು, ಹೋಟೆಲ್, ಶಾಲೆ, ಕಾಲೇಜು ಬೆಳಗಿನಿಂದಲೇ ಮುಚ್ಚಿದ್ದವು. ಮಹಾತ್ಮಾ ಗಾಂಧಿ ವೃತ್ತದಿಂದ ಭದ್ರಾ ಕಾಮಗಾರಿ ಯೋಜನಾ ಸ್ಥಳದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ, ಸರ್ಕಾರದ ಅಣಕು ಶವಯಾತ್ರೆ ಮತ್ತು ಬೃಹತ್ ಮಾನವ ಸರಪಳಿ ಏರ್ಪಡಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಾತನ್ನು ಉಳಿಸಿಕೊಂಡಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಡಿ.ಸಿ. ಸುರೇಶ್, ತರೀಕೆರೆ ತಾಲೂಕಿಗೆ ಪ್ರತ್ಯೇಕ ಏತ ನೀರಾವರಿ ಯೋಜನೆ ಮಾಡುವ ಮೂಲಕ ಇಡೀ ತಾಲೂಕಿಗೆ ಕುಡಿಯಲು ಮತ್ತು ಕೃಷಿಗೆ ನೀರು ನೀಡಲು ನೀರಾವರಿ ಸಚಿವರು ಕಳೆದ ಜೂನ್ 17ರಂದು ನಡೆಸಿದ ಸಭೆಯಲ್ಲಿ ರೈತರ ಬೇಡಿಕೆಗೆ ಸಮ್ಮತಿಸಿದ್ದರು. ವಾರದೊಳಗಾಗಿ ಈ ಬಗ್ಗೆ ಸರ್ವೆ ಕಾರ್ಯ ಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೂ ಸಚಿವರು ಸೂಚಿಸಿದ್ದರು. ಆದರೆ, ಇಲ್ಲಿಯವರೆಗೂ ತಾಲೂಕಿನ ನೀರಾವರಿ ಯೋಜನೆಗೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಜಲಾಶಯದ ನೀರಿನ ಸಂಪೂರ್ಣ ಹಕ್ಕನ್ನು ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಕಾದಿರಿಸಿ ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ತರೀಕೆರೆ ತಾಲೂಕಿಗೆ 5.5. ಟಿಎಂಸಿ ನೀರಿನ ಹಕ್ಕು ಕಾದಿರಿಸುವವರೆಗೆ ನಮ್ಮ ಹೋರಾಟ, ಪ್ರತಿಭಟನೆ ಮುಂದುವರಿಯಲಿದೆ. ತಾಲೂಕಿನ ಜನಪ್ರತಿನಿಧಿಗಳು, ರೈತರು, ಸಾರ್ವಜನಿಕರು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಗೌ.ರು. ಓಂಕಾರಯ್ಯ ಮಾತನಾಡಿ, ತಾಲೂಕಿಗೆ ನೀರಿನ ಅಗತ್ಯತೆ ಮತ್ತು ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.
ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಮಾತನಾಡಿ, ನೀರು ಪಡೆಯುವುದು ಪ್ರತಿಯೊಬ್ಬರ ಹಕ್ಕು. ಎಲ್ಲರೂ ಸಂಘಟಿತರಾಗಿ ಚಳವಳಿಯಲ್ಲಿ ಭಾಗವಹಿಸೋಣ ಎಂದು ತಿಳಿಸಿದರು.
ತಾಪಂ ಸದಸ್ಯ ರಾಜ್ಕುಮಾರ್ ಮಾತನಾಡಿ, ತಾಲೂಕಿಗೆ ಅನ್ಯಾಯವಾಗುತ್ತಿದೆ. ನೀರು ಪಡೆಯಲು ಇದೇ ಕಡೆ ಅವಕಾಶ ಎಂದು ತಿಳಿಸಿದರು. ಹಳಿಯೂರು ಸೋಮಶೇಖರ್, ಜಾವೂರು ಚಂದ್ರಪ್ಪ, ಮುದುಗುಂಡಿ ಲೋಹಿತ್, ನವೀನ್ ಮತ್ತಿತರರು ಮಾತನಾಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ಅಧ್ಯಕ್ಷ ಡಿ.ಸಿ. ಸುರೇಶ್, ಗೌರವಾಧ್ಯಕ್ಷ ಗೌ.ರು. ಓಂಕಾರಯ್ಯ, ಕಾರ್ಯಾಧ್ಯಕ್ಷ ಸೋಮಶೇಖರ್ ಹಳಿಯೂರು, ಪ್ರಧಾನ ಕಾರ್ಯದರ್ಶಿ ಸೊಕ್ಕೆ ನವೀನ್ ಕಾರ್ಯದರ್ಶಿ ಪುಟ್ಟಸ್ವಾಮಿ, ಜಯಕೃಷ್ಣಮೂರ್ತಿ, ಅಜ್ಜಂಪುರ ಸೋಮಣ್ಣ, ಸಿದ್ದಪ್ಪ, ಲಕ್ಷ್ಮಣ್, ಸೂರಪ್ಪಗೌಡ್ರು, ಮಲ್ಲಿಕಾ ಹಳಿಯೂರು, ಅರುಣ್ಕುಮಾರ್, ಶಿವು, ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ತಾಪಂ ಸದಸ್ಯ ರಾಜ್ಕುಮಾರ್, ಜಾವೂರು ಚಂದ್ರಪ್ಪ, ನಂಜುಂಡಪ್ಪ, ಮುದುಗುಂಡಿ, ಲೋಹಿತ್, ಅಜ್ಜಂಪುರ, ಸೊಕ್ಕೆ, ಅತ್ತಿಮೊಗ್ಗೆ, ಗೌರಾಪುರ, ಹೆಬ್ಬೂರು, ಜಾವೂರು ತಿಮ್ಮಾಪುರ, ಅಬ್ಬಿನಹೊಳಲು ಮತ್ತು ಸುತ್ತಮುತ್ತಲ ಗ್ರಾಮಗಳ ಸಾವಿರಾರು ರೈತರು ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ, ಮಾನವ ಸರಪಳಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement