ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಿಕ್ಷಕರ ಕೈಯಲ್ಲಿ ಮಕ್ಕಳ ಉಜ್ವಲ ಭವಿಷ್ಯ

Mainashree
Updated On : 23 Jan 2014, 12:26 pm

ಚಿಕ್ಕಮಗಳೂರು:  ಸಮಾಜದ ಉನ್ನತಿಗೆ ತಕ್ಕಂತೆ ಮಕ್ಕಳನ್ನು ಬೆಳೆಸಿ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಪ್ರೊ. ಹೇಮಂತ್ ಪ್ರಭು ಹೇಳಿದ್ದಾರೆ.
ನಗರದ ಕುವೆಂಪು ಕಲಾ ಮಂದಿರದಲ್ಲಿ ಇತ್ತೀಚೆಗೆ ನಡೆದ ಕ್ರೈಸ್ ಕಿಂಗ್ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು, ಸಾವಿನ ನಡುವಿನ ಜೀವನದಲ್ಲಿ ನಾವು ಮಾಡುವ ಉಪಕಾರ ಮತ್ತು ಸಾಧನೆ ಶಾಶ್ವತವಾಗಿರುತ್ತದೆ. ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಎಲ್ಲರಲ್ಲೂ ಒಂದೊಂದು ರೀತಿ ವಿಭಿನ್ನ ಪ್ರತಿಭೆಗಳು ಅಡಗಿರುತ್ತದೆ ಅದನ್ನು ಗುರುತಿಸಿ ಹೊರತರುವ ಜವಾಬ್ದಾರಿ ಶಿಕ್ಷಕರದ್ದಾಗಿದ್ದು, ಈ ಸಂಬಂಧ ಮೌಲ್ಯ ಬೆಳೆಸುವ ಶಿಕ್ಷಣಕ್ಕೆ ಮುಂದಾಗಬೇಕೆಂದರು.
ನಗರಸಭೆ ಸದಸ್ಯ ಭುಜೇಂದ್ರರಾಜ್ ಅರಸ್ ಮಾತನಾಡಿ, ಗಿಡಕ್ಕೆ ಪ್ರೀತಿ ಎಂಬ ನೀರನ್ನು ಹಾಕಿ, ವಾತ್ಸಲ್ಯದ ಗೊಬ್ಬರ ನೀಡಿ ಪೋಷಿಸಿದರೆ ಹೆಮ್ಮರವಾಗಿ ಬೆಳೆದು ಅದು ಫಸಲನ್ನು ನೀಡುತ್ತದೆ. ಅದೇ ರೀತಿ ಮಕ್ಕಳಿಗೆ ಎಳೆಯ ವಯಸ್ಸಿನಿಂದಲೆ ಶಿಕ್ಷಣದ ಮೂಲಕ ತಿದ್ದಿ ತೀಡುವ ಜೊತೆ ಸಂಸ್ಕೃತಿ, ಸದ್ಗುಣಗಳನ್ನು ಬೆಳೆಸಿದರೆ ಪೋಷಕರಿಗೆ ಹೆಮ್ಮೆಯ ಮಗುವಾಗಿ ದೇಶಕ್ಕೆ ಉತ್ತಮ ಪ್ರಜೆಯಾಗುತ್ತಾರೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಟಿ.ವಿ. ಚಂದ್ರಪ್ರಭಾ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಡಾ. ಶ್ರೀಕಾಂತ್, ಸಂಸ್ಥೆಯ ಕಾರ್ಯದರ್ಶಿ ಸಿ.ಹೆಚ್. ಶ್ರೀನಿವಾಸ್, ಶಾಸ್ತ ಮುರಳಿ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement