ಸುದ್ದಿ ಸಂಕ್ಷೇಪ
ಅನುದಾನ:ಸಂಸದರಿಗೆ ಮನವಿ
ನರಸಿಂಹರಾಜಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯಿಂದ ಸಾಂಸ್ಕೃತಿಕ ಸಭಾ ಭವನ ನಿರ್ಮಿಸಲು ಅನುದಾನ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘವು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಜಯಪ್ರಕಾಶ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿಗೆ ಸೋಮವಾರ ಸಂಸದ ಜಯಪ್ರಕಾಶ ಹೆಗಡೆ ಭೇಟಿ ನೀಡಿದ್ದ ಸಂದರ್ಭ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೌಸ್ ಮೋಹಿದ್ದೀನ್, ಪ್ರಧಾನ ಕಾರ್ಯದರ್ಶಿ ಎಂ.ಪ್ರಕಾಶ್, ಖಜಾಂಚಿ ಕೃಷ್ಣನಾಯಕ್, ರಾಜ್ಯ ಪರಿಷತ್ ಸದಸ್ಯ ಕೆ.ಪ್ರಸನ್ನ ಅವರ ತಂಡ ಮನವಿ ಅರ್ಪಿಸಿತು. ತಾಲೂಕು ಕೇಂದ್ರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಖಾಲಿ ನಿವೇಶನವಿದೆ. ಇಲ್ಲಿ ನೌಕರರ ಸಂಘದ ಸಭಾ ಭವನ ನಿರ್ಮಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕಟ್ಟಡಕ್ಕೆ ಅಂದಾಜು 40 ಲಕ್ಷ ಬೇಕಾಗುತ್ತದೆ. ಸಂಸದರ ನಿಧಿಯಿಂದ ಅನುದಾನ ಕೊಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಫೆ.2 ರಂದು
ಥ್ರೋಬಾಲ್ ಸ್ಪರ್ಧೆ
ನರಸಿಂಹರಾಜಪುರ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಫೆ.2ರಂದು ವಿವಾಹಿತ ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯಾವಳಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ಭಾರತಿ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕುಗಳ ವಿವಾಹಿತ ಮಹಿಳೆಯರು ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. 1 ತಂಡದಲ್ಲಿ 9 ರಿಂದ 11 ಸದಸ್ಯರು ಭಾಗವಹಿಸಬಹುದು. ವಿಜೇತ ತಂಡಕ್ಕೆ ಬಹುಮಾನ ನೀಡಲಾಗುವುದು. ಆಸಕ್ತ ತಂಡಗಳವರು ಮಾಹಿತಿ , ಹೆಸರು ನೋಂದಾಯಿಸಲು 9448817328, 08266-220150, 08266-228172 ಈ ಸಂಖ್ಯೆಗೆ ಸಂಪರ್ಕಿಸಿ.
ಇಂದು ವಿವಿಧೆಡೆ
ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು: ನಗರದ ರಸ್ತೆ ಮಧ್ಯದಲ್ಲಿ ಇರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಮಾರ್ಕೆಟ್ ರಸ್ತೆ, ತಿಲಕ್ ಪಾರ್ಕ್, ವಿಜಯಪುರ, ನೆಹರುನಗರ, ಆರ್.ಜಿ. ರಸ್ತೆ, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಬಸವರಾಜ ಲೇಔಟ್, ಜೈಲ್ ರೋಡ್ನ ಎಂ.ಜಿ. ರಸ್ತೆ, ಐ.ಜಿ. ರಸ್ತೆ, ಆಸ್ಪತ್ರೆ, ಡಿ.ಸಿ. ಕಚೇರಿ, ವಾರ್ತಾ ಭವನ, ಬೋಳರಾಮೇಶ್ವರ, ಜಯನಗರ, ಪಾರ್ವತಿಪುರ, ಗವನಹಳ್ಳಿ, ರಾಂಪುರದ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಮೂಡಿಗೆರೆ: ಸಚೇತನ ಸಂಘಕ್ಕೆ ಆಯ್ಕೆ
ಮೂಡಿಗೆರೆ: ಇಲ್ಲಿನ ಸಚೇತನ ಯುವ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಪ್ರವೀಣ್ ಜೈನ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಉಪೇಂದ್ರ (ಮಂಜುನಾಥ್), ಖಜಾಂಚಿಯಾಗಿ ನಿಶ್ಚಲ್ ಜೈನ್ ಮಿನೇಜಸ್, ಸಹ ಕಾರ್ಯದರ್ಶಿಗಳಾಗಿ ಅನಿಲ್ ಎಂ.ವಿ., ಅಬ್ದುಲ್ ನಜೀಮ್, ಕಿರಣ್ ಎಸ್., ಕ್ರೀಡಾ ಕಾರ್ಯದರ್ಶಿಯಾಗಿ ಫ್ರಾನ್ಸಿಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ಕುಮಾರ್, ಉಪಾಧ್ಯಕ್ಷರಾಗಿ ಪ್ರವೀಣ್ ಕೆ.ಎಲ್.ಎಸ್., ನಾರಾಯಣ ರಾಜ್ ಅರಸ್, ಫ್ರಾನ್ಸಿಸ್, ರಘು ಎನ್., ರವೀಂದ್ರ, ಕೆ.ಎಲ್. ಬಸವರಾಜು ನೇಮಕಗೊಂಡಿದ್ದಾರೆ.
ಶಿಕ್ಷಕರಿಗೆ ಗುರುಶ್ರೀ ಪುರಸ್ಕಾರ
ಬೀರೂರು: ಪಟ್ಟಣದ ಅತ್ಯಂತ ಹಳೆಯದಾದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ವಾರ್ಷಿಕೋತ್ಸವ, ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡು, ಸೇವೆ ಸಲ್ಲಿಸುತ್ತಿರುವ ಹಿರಿಯ ಶಿಕ್ಷಕರನ್ನು ಗುರುಶ್ರೀ ಪುರಸ್ಕಾರದೊಂದಿಗೆ ಗೌರವಿಸಿದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದ ದಾನಿ ಕಾಫಿ ಬೆಳೆಗಾರ ಪತ್ರೆ ಸದಾಶಿವನ್ ಮಾತನಾಡಿ, ಅಂದಿನ ಶಿಕ್ಷಕರಲ್ಲಿನ ಕಲಿಸುವಿಕೆಯ ಪರಿ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡಿ, ಈ ಶಾಲೆಯ ಬಗ್ಗೆ ಅತ್ಯಂತ ಹೆಮ್ಮೆಯಿದೆ ಎಂದರು.
ಪ್ರಾಸ್ತಾವಿಕವಾಗಿ ಶಾಲಾ ಮುಖ್ಯ ಶಿಕ್ಷಕಿ ಜಯಮ್ಮ ಮಾತನಾಡಿ, ಈ ಶಾಲೆಗೆ ಹೆಚ್ಚಿನ ಮಕ್ಕಳನ್ನು ಕಳುಹಿಸುವ ಮೂಲಕ ಹಿಂದಿನ ವೈಭವ ಈ ಶಾಲೆಯಲ್ಲಿ ಮರುಳಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ಬಿ.ಎನ್. ನರಸಿಂಹಮೂರ್ತಿ, ನರಸಿಂಹ ಅಯ್ಯಂಗಾರ್, ಆರ್. ರತ್ನಯ್ಯ, ರಾಮಚಂದ್ರಪ್ಪ, ಸಂಪತ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಬಿ.ಎನ್. ನರಸಿಂಹಮೂರ್ತಿ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಷೀರ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಬಿ.ಪಿ. ನಾಗರಾಜ್, ಪುರಸಭಾ ಸದಸ್ಯೆ ಮಮತಾ ಹರೀಶ್, ದೈಹಿಕ ಪರಿವೀಕ್ಷಕಕ ಮಲ್ಲಪ್ಪ, ಸುಮಿತ್ರಮ್ಮ, ಬಿ.ಆರ್.ಸಿ. ಸಾವಿತ್ರಮ್ಮ, ದಾನಿ ಶಾಲೆಯ ಹಿರಿಯ ವಿದ್ಯಾರ್ಥಿ ಕೊಟ್ರೇಶಪ್ಪ, ಪೋಷಕರು ಪಾಲ್ಗೊಂಡಿದ್ದರು.
'ಪಠ್ಯೇತರ ಚಟುವಟಿಕೆ ಅವಶ್ಯ'
ಶೃಂಗೇರಿ: ವಿದ್ಯಾರ್ಥಿಗಳು ತಮ್ಮ ಕಲಿಕೆಯ ದಿನಗಳಲ್ಲಿ ಪಠ್ಯಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಲ್. ಉಮೇಶ್ ತಿಳಿಸಿದರು.
ಅವರು ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ತಾಲೂಕಿನ ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ದೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೂ ತಮ್ಮದೇ ಆದ ಹಕ್ಕುಗಳಿವೆ. ಅವುಗಳ ಅರಿವು ಅವರಲ್ಲಿ ಮೂಡಿಸಬೇಕು. ವಿದ್ಯಾರ್ಥಿಗಳು ಸಾಂಸ್ಕ್ರೃತಿಕ, ಕ್ರೀಡೆ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಬೆಳೆಯಲು ಸಾದ್ಯ ಎಂದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಂಕಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಂಗನಾಥ್, ಶಿಕ್ಷಣ ಸಂಯೋಜಕಿ ರಶ್ಮಿ, ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಬಿತ್ತಿ ಪತ್ರ ರಚಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ತಾಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬುಧವಾರ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಲಿದೆ.