1.75 ಕೋಟಿ ತಸ್ತಿಕ್ ಬಿಡುಗಡೆ
ಚಿಕ್ಕಮಗಳೂರು: ಜಿಲ್ಲೆಯ ದೇವಾಲಯಗಳಿಗೆ ರಾಜ್ಯ ಸರ್ಕಾರ 1,75,94,150 ತಸ್ತಿಕ್ ಬಿಡುಗಡೆ ಮಾಡಿದೆ.
2012- 13ನೇ ಸಾಲಿನ ಕೊನೆಯ ಕಂತು ಹಾಗೂ 2013- 14ನೇ ಸಾಲಿನ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.
ವಾರ್ಷಿಕ 12 ಸಾವಿರ ತಸ್ತಿಕ್ ಪಡೆಯುತ್ತಿದ್ದ ಸಂಸ್ಥೆಗಳಿಗೆ ರಾಜ್ಯ ಸರ್ಕಾರ 2013-14ನೇ ಸಾಲಿನಿಂದ ಅನ್ವಯವಾಗುವಂತೆ ಪ್ರತಿ ಸಂಸ್ಥೆಗಳಿಗೆ 24 ಸಾವಿರ ತಸ್ತಿಕ್ ಭತ್ಯೆ ಹೆಚ್ಚಿಸಿದ್ದು, ಇದರಲ್ಲಿ ಮೊದಲ ಕಂತಿನಲ್ಲಿ 16 ಸಾವಿರ ಬಿಡುಗಡೆ ಮಾಡಿದೆ.
ಚಿಕ್ಕಮಗಳೂರು ತಾಲೂಕಿನ 441 ಸಂಸ್ಥೆಗಳಿಗೆ 70.56 ಲಕ್ಷ, ಮೂಡಿಗೆರೆ ತಾಲೂಕಿನ 74 ದೇವಾಲಯಗಳಿಗೆ 11.84 ಲಕ್ಷ, ಕೊಪ್ಪ ತಾಲೂಕಿನ 132 ದೇವಾಲಯಗಳಿಗೆ 21.12 ಲಕ್ಷ, ಶೃಂಗೇರಿ ತಾಲೂಕಿನ 52 ದೇವಾಲಯಗಳಿಗೆ 8.32 ಲಕ್ಷ, ಕಡೂರು ತಾಲೂಕಿನ 54 ದೇವಾಲಯಗಳಿಗೆ 8.64 ಲಕ್ಷ, ತರೀಕೆರೆ ತಾಲೂಕಿನ 66 ದೇವಾಲಯಗಳಿಗೆ 10.56 ಲಕ್ಷ ಹಾಗೂ ಎನ್.ಆರ್. ಪುರ ತಾಲೂಕಿನ 25 ದೇವಾಲಯಗಳಿಗೆ 4 ಲಕ್ಷ ಬಿಡುಗಡೆ ಮಾಡಲಾಗಿದೆ.
ಇದರ ಜತೆಗೆ ಭಂಡಿಗಡಿಯ ತೆಂಗಿನ ಮಠ, ಹರಿಹರಪುರ ಮಠ, ಹರಿಹರಪುರದ ಮಲ್ಲೇಶಯ್ಯನ ಛತ್ರ, ಹಾಲತ್ತೂರಿನ ಲೋಕಪರಮೇಶ್ವರಿ ದೇವಾಲಯ, ಶೃಂಗೇರಿ ಮಠ ಹಾಗೂ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಸ್ತಿಕ್ ಬಿಡುಗಡೆ ಮಾಡಲಾಗಿದೆ.
2012- 13ನೇ ಸಾಲಿನ ಕೊನೆಯ ಕಂತಿನ ತಸ್ತಿಕ್ ಭತ್ಯೆ 33,59,192 ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ಚಿಕ್ಕಮಗಳೂರು ತಾಲೂಕಿಗೆ 17.60 ಲಕ್ಷ, ಮೂಡಿಗೆರೆ ತಾಲೂಕಿಗೆ 2.96 ಲಕ್ಷ, ಕೊಪ್ಪ ತಾಲೂಕಿಗೆ 5.28 ಲಕ್ಷ, ಶೃಂಗೇರಿ ತಾಲೂಕಿಗೆ 1.20 ಲಕ್ಷ, ಕಡೂರು ತಾಲೂಕಿಗೆ 2.16 ಲಕ್ಷ, ತರೀಕೆರೆ ತಾಲೂಕಿಗೆ 1 ಲಕ್ಷ ಬಿಡುಗಡೆಯಾಗಿದ್ದು, ಡಿಸೆಂಬರ್ 21 ರಂದು ಜಿಲ್ಲಾಡಳಿತ ಜಿಲ್ಲೆಯ ತಹಸೀಲ್ದಾರ್ ಅವರಿಗೆ ಹಣ ಬಿಡುಗಡೆ ಮಾಡಿದೆ.
ಬಿಡುಗಡೆಗೆ ವಿಳಂಬ: ರಾಜ್ಯ ಸರ್ಕಾರ ತಸ್ತಿಕ್ ಭತ್ಯೆ ಹೆಚ್ಚಳ ಮಾಡಿ ಮೊದಲ ಕಂತಿನ 16 ಸಾವಿರಗಳಂತೆ ರಾಜ್ಯದ 30 ಜಿಲ್ಲೆಗಳ 27,100 ದೇವಾಲಯಗಳಿಗೆ 43,36 ಕೋಟಿಯನ್ನು ಕಳೆದ ವರ್ಷ ಆಗಸ್ಟ್ 7 ರಂದು ಬಿಡುಗಡೆ ಮಾಡಿತ್ತು.
ಅದರಂತೆ ಚಿಕ್ಕಮಗಳೂರು ಜಿಲ್ಲೆಗೆ 1,35,84,000 ಬಿಡುಗಡೆಯಾಗಿತ್ತು. ಆದರೆ, ಈ ಹಣ ಜಿಲ್ಲಾಡಳಿತದಿಂದ ತಾಲೂಕು ತಹಸೀಲ್ದಾರ್ಗಳಿಗೆ ಡಿಸೆಂಬರ್ 21 ರಂದು ಬಿಡುಗಡೆ ಮಾಡಲಾಗಿದೆ. ಅಂದರೆ ಸುಮಾರು 5 ತಿಂಗಳ ಕಾಲ ತಡವಾಗಿ ತಹಸೀಲ್ದಾರ್ ಖಾತೆಗೆ ಜಮಾ ಮಾಡಲಾಗಿದೆ. ತಹಸೀಲ್ದಾರ್ಗಳ ಖಾತೆಗೆ ಹಣ ಜಮಾವಾಗಿ ಒಂದು ತಿಂಗಳು ಕಳೆದರೂ ಸಂಬಂಧಪಟ್ಟ ದೇವಾಲಯಗಳ ಅರ್ಚಕರಿಗೆ ಈವರೆಗೆ ತಲುಪಿಲ್ಲ. ಅರ್ಚಕರಿಗೆ ಈ ಹಣ ತಲುಪಲು ಇನ್ನಷ್ಟು ದಿನ ತಡವಾಗಿದೆ. ಅಂದರೆ ದೇವರು ಕೊಟ್ಟರೂ ಪೂಜಾರಿಗೆ ಕೊಡಲಿಲ್ಲ ಎಂಬಂತಾಗಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹಣವನ್ನು ಅರ್ಚಕರಿಗೆ ತಲುಪಿಸಲು ಮೊದಲಿನಿಂದಲೂ ತಡವಾಗುತ್ತಿದೆ. ಹಲವು ಮಂದಿ ಅರ್ಚಕರು ತಾಲೂಕು ಕಚೇರಿಗೆ ಅಲೆಯುವುದು ತಪ್ಪಿಲ್ಲ. ಈಗ ಬಿಡುಗಡೆ ಮಾಡಿರುವ ಎರಡು ಕಂತಿನ 20 ಸಾವಿರವನ್ನು ಅರ್ಚಕರಿಗೆ ಸಕಾಲಕ್ಕೆ ಬಿಡುಗಡೆ ಮಾಡಿದ್ದೆ ಆದಲ್ಲಿ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ.