ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ
ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಜನರಿಂದ ಜನರಿಗಾಗಿ ಜನರಿಗೋಸ್ಕರ ನಡೆಯುವ ಪ್ರತಿನಿಧಿ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರು ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಹೊಣೆ ಆಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಚ್.ಎಸ್. ಕಮಲ ಹೇಳಿದ್ದಾರೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಪ್ರಜೆಗಳೆ ಪ್ರಭುಗಳು, ಪ್ರಭು ಪ್ರಬುದ್ಧನಾಗಿರಬೇಕು. ತನ್ನ ಪ್ರತಿನಿಧಿಗಳ ಆಯ್ಕೆಯ ಸಂದರ್ಭದಲ್ಲಿ ವಿವೇಕ, ವಿವೇಚನೆ ಬಳಸಿ ಯಾವುದೇ ಜಾತಿ, ಜನಾಂಗ, ಧರ್ಮ ಹಾಗೂ ಮತ್ತಿತರ ಆಮಿಷಗಳ ಪ್ರಭಾವಕ್ಕೆ ಒಳಗಾಗದೆ ಮತದಾನ ಮಾಡಬೇಕೆಂದು ಕರೆ ನೀಡಿದರು.
ಹೆಚ್ಚಿನ ಒಲವು: ಮತದಾನ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗ ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಪ್ರಚಾರ ಕಾರ್ಯ ಕೈಗೊಂಡ ಪರಿಣಾಮ ಯುವಕರು ಮತದಾನದ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂದರು.
ವೈಶಿಷ್ಟ್ಯ: ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಮಾತನಾಡಿ, ಭಾರತದ ವೈಶಿಷ್ಟ್ಯ ಎಂದರೆ ಪ್ರಜಾಪ್ರಭುತ್ವ. ಇದು ಗಟ್ಟಿಯಾಗಿ ಬೇರೂರಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ನಾಗರಿಕರು ತಮ್ಮ ಕರ್ತವ್ಯ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದ ಅವರು, ಚುನಾವಣೆಯಲ್ಲಿ ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೇ ನಿರ್ಭೀತರಾಗಿ ಮತ ಚಲಾಯಿಸಬೇಕೆಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್ ಮಾತನಾಡಿ, ದೇಶದ ಪ್ರಜಾಪ್ರಭುತ್ವದ ಯಶಸ್ಸು ಇತರೆ ರಾಷ್ಟ್ರಗಳಿಗೆ ಬೆರಗಾಗಿಸಿದೆ ಎಂದ ಅವರು, ಪ್ರತಿಯೊಬ್ಬ 18 ವರ್ಷದ ನಾಗರಿಕರು ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕೆಂದರು.
ಪ್ರತಿಜ್ಞಾವಿಧಿ: ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಮತದಾರರ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಜಾಗೃತ ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪವಿತ್ರವಾದ ಕಾರ್ಯವಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಒಟ್ಟು 8,38,044 ಮತದಾರರಿದ್ದು, ಅವರಲ್ಲಿ 4,25,283 ಮಹಿಳೆಯರು ಹಾಗೂ 4,14,543 ಪುರುಷ ಮತದಾರರಿದ್ದಾರೆ ಎಂದರು.
ಮತದಾರ ಪಟ್ಟಿ ನೋಂದಣಿ ಕಾರ್ಯವು ಚುನಾವಣಾ ನಾಮನಿರ್ದೇಶನ ಮಾಡುವ ಕೊನೆಯವರೆಗೂ ಅವಕಾಶವಿರುತ್ತದೆ ಎಂದ ಅವರು, ಯುವಜನರು ತಪ್ಪದೆ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದರ ಜತೆ ಮತದಾನ ಮಾಡಬೇಕೆಂದರು.
ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ, ಪದವಿಪೂರ್ವ ಕಾಲೇಜು ಶಿಕ್ಷಣದ ಉಪ ನಿರ್ದೇಶಕ ರುದ್ರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಉಪಸ್ಥಿತರಿದ್ದರು. ತಹಸೀಲ್ದಾರ್ ಶಿವೇಗೌಡ ಸ್ವಾಗತಿಸಿದರು. ಶಿಕ್ಷಕ ಪ್ರವೀಣ್ ವಂದಿಸಿದರು.