ಇನಾಂ ಭೂಮಿ: ನಾಳೆ ನಿಲುವಳಿ ಮಂಡನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು, ಜ.25
ಕಳಸೇಶ್ವರ ಇನಾಂ ಭೂಮಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸೋಮವಾರ ನಿಲುವಳಿ ಸೂಚನೆ ಮಂಡಿಸಲಾಗುವುದು ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.
ಕಳಸದ ಇನಾಂ ಭೂಮಿಯಲ್ಲಿ ವಾಸವಾಗಿರುವವರನ್ನು ತೆರವುಗೊಳಿಸಿದ್ದೆಯಾದರೆ ಜನರಿಗೆ ತುಂಬಾ ತೊಂದರೆಯಾಗಲಿದೆ. ಈ ವಿಚಾರವನ್ನು ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ಇನಾಂ ಭೂಮಿಯಲ್ಲಿ ಹಲವು ವರ್ಷಗಳಿಂದ ಜನರು ವಾಸವಾಗಿದ್ದಾರೆ. ಕೆಲವರಿಗೆ ಹಕ್ಕುಪತ್ರ ನೀಡಲಾಗಿದೆ. ಕಳೆದ 2012 ರಲ್ಲಿ ಹೈಕೋರ್ಟ್ ಇದೊಂದು ಮೀಸಲು ಅರಣ್ಯ ಪ್ರದೇಶ ಇಲ್ಲಿರುವ ಜನರನ್ನು ಖುಲ್ಲಾಗೊಳಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಪ್ರಸ್ತಾಪಿಸಲಾಗಿದೆ. ಜೆಡಿಎಸ್ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ಸ್ವತಃ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಇಲ್ಲಿನ ಜನರಿಗೆ ನೆರವಿಗೆ ಬರುವಂತೆ ಮನವಿ ಮಾಡಿರುವ ಜನತೆಗೆ ಕೆಲವು ಸಲಹೆಗಳನ್ನು ಸಹ ನೀಡಿದ್ದರು.
ಮನವರಿಕೆ ಮಾಡಿ: ಇಲ್ಲಿ ವಾಸವಾಗಿರುವ ಜನರನ್ನು ತೆರವುಗೊಳಿಸಬಾರದು. ಇಲ್ಲಿನ ಅರಣ್ಯ ಭೂಮಿಗೆ ಪರ್ಯಾಯವಾಗಿ ಕುದುರೆಮುಖದಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿ ಈ ಸಮಸ್ಯೆ ಪರಿಹಾರ ಮಾಡಬಹುದೆಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಇನಾಂ ಭೂಮಿಯಲ್ಲಿ ವಾಸವಾಗಿರುವ ಜನರ ಪರವಾಗಿ ನಿಲ್ಲಬೇಕು. ಇಲ್ಲಿನ ವಾಸ್ತವಿಕತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕು. ಈ ಸಂಬಂಧ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಬಾಲಸುಬ್ರಹ್ಮಣ್ಯಂ ಸಮಿತಿ ಅವೈಜ್ಞಾನಿಕವಾಗಿ ವರದಿ ನೀಡಿದೆ. ದೇಶದಲ್ಲಿ ಈವರೆಗೆ ಎರಡು ಬಾರಿ ಸರ್ವೆ ಕಾರ್ಯ ನಡೆದಿದೆ. ಸರ್ಕಾರ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ಗಡಿ ಗುರುತು ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ಜಿಲ್ಲಾಧ್ಯಕ್ಷ ಮಂಜಪ್ಪ, ಮುಖಂಡರಾದ ಎಚ್.ಎಚ್. ದೇವರಾಜ್, ಜ್ಯೋತಿ ಈಶ್ವರ್, ಪದ್ಮಾ ತಿಮ್ಮೇಗೌಡ, ಅಶೋಕ್ ಉಪಸ್ಥಿತರಿದ್ದರು.
ಯುವ ಚೇತನ ರ್ಯಾಲಿ
ದೇಶದ ರಾಜಕಾರಣದ ಪರಿಸ್ಥಿತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಜ. 29 ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಜೆಡಿಎಸ್ ಯುವ ಚೇತನ ರ್ಯಾಲಿ ಹಮ್ಮಿಕೊಂಡಿದೆ ಎಂದು ಬಿ.ಬಿ. ನಿಂಗಯ್ಯ ಹೇಳಿದರು.
ರ್ಯಾಲಿಯಲ್ಲಿ ಒಂದು ಸಾವಿರ ವಾಹನಗಳಲ್ಲಿ 2 ಲಕ್ಷ ಯುವಕರು ಪಾಲ್ಗೊಳ್ಳಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಿಂದ 3 ಸಾವಿರ ಯುವಕರು ಪಾಲ್ಗೊಳ್ಳಲಿದ್ದಾರೆ ಎಂದರು.
ದೇಶದಲ್ಲಿ ಜಾತಿ- ಜಾತಿಗಳ, ಧರ್ಮ- ಧರ್ಮಗಳ ನಡುವೆ ಕೋಮುವಾದದ ಗುಣ ಬೆಳೆಯುತ್ತಿದೆ. ನಿರುದ್ಯೋಗದಿಂದಾಗಿ ಯುವಕರು ತತ್ತರಿಸಿದ್ದಾರೆ. ಬೆಲೆ ಏರಿಕೆಯಿಂದಾಗಿ ಜೀವನೋಪಾಯಕ್ಕಾಗಿ ಬೇಕಾಗುವ ವಸ್ತುಗಳಿಗೆ ಜನ ಪರದಾಡುವಂತಾಗಿ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ತಿಳಿಸಿದರು.