ಕನ್ನಡಾಭಿಮಾನ ಅಂತರಂಗದಿಂದ ಬರಲಿ: ಕೋಡಿಮಠ ಶ್ರೀ ಆಶಯ
ಲಿಂಗದಹಳ್ಳಿ: ಕನ್ನಡ ಪ್ರಾಚೀನ ಭಾಷೆ. ಕನ್ನಡಾಭಿಮಾನ ಆಡಂಬರವಾಗದೆ ಅಂತರಂಗದಿಂದ ಬರಬೇಕೆಂದು ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಹೊಯ್ಸಳ ಕನ್ನಡ ಬಳಗ ಶುಕ್ರವಾರ ಸಂಜೆ ಆಯೋಜಿಸಿದ್ದ ಕನ್ನಡ ನುಡಿಹಬ್ಬ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ವೈಜ್ಞಾನಿಕ ಮತ್ತು ಚಾರಿತ್ರಿಕ ಹಿನ್ನೆಲೆ ಕನ್ನಡ ಭಾಷೆಗಿದೆ. ಕನ್ನಡದ ಪ್ರಾಮುಖ್ಯ ಅರ್ಥ ಮಾಡಿಕೊಳ್ಳಬೇಕು. ಬದುಕಿಗೆ ಹಲವು ಭಾಷೆಗಳು ಬೇಕಾದರೂ ಮಾತೃ ಭಾಷೆಯೇ ಅಡಿಪಾಯ. ಬದುಕಿಗೆ ಬೇಕಾದ ಸಂಗತಿಗಳನ್ನು ಸಾಹಿತಿಗಳು, ಕಲಾವಿದರು, ದಾಸರು, ಶರಣರು ಕವಿಪುಂಗವರು ಕಟ್ಟಿಕೊಟ್ಟಿದ್ದಾರೆ. ಸದ್‌ಚಿಂತನೆಗಳ ಬೆಳಕಿನಲ್ಲಿ ನಾಡನ್ನು ಕಟ್ಟಬೇಕು. ಅನ್ಯಭಾಷೆಗಳ ವ್ಯಾಮೋಹಕ್ಕೆ ತುತ್ತಾಗದೆ ಕನ್ನಡವನ್ನು ಹೃದಯಸ್ಥ ಮಾಡಿಕೊಳ್ಳುವುದು ಮುಖ್ಯ ಎಂದರು.
ಒತ್ತಡದ, ಆತಂಕದ ಬದುಕಿನಲ್ಲಿ ಸಾಹಿತ್ಯ- ಕಲೆ- ಸಂಗೀತ ತಂಗಾಳಿ ತಂದುಕೊಡುತ್ತದೆ. ಕನ್ನಡ ನುಡಿಹಬ್ಬವನ್ನು ಪ್ರತಿವರ್ಷ ಆಚರಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ವೈಭವವನ್ನು ಮೆರೆಸುವ ಪುಣ್ಯದ ಕೆಲಸ ಹೊಯ್ಸಳ ಕನ್ನಡಬಳಗ ಮಾಡುತ್ತಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.
ಸಾತ್ವಿಕತೆ: ಕಲ್ಕಟ್ಟ ಪುಸ್ತಕ ಮನೆಯ ಎಚ್.ಎಂ. ನಾಗರಾಜರಾವ್ ಮಾತನಾಡಿ, ಸಾತ್ವಿಕತೆ ಕನ್ನಡದ ಶ್ರೇಷ್ಠ ಗುಣ. ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟ ಸುಮಂಗಲಿಯರ ಅರಿಶಿಣ-ಕುಂಕುಮ ಸಂಕೇತಿಸುತ್ತದೆ. ಕೂಡಿ ಬಾಳುವುದೇ ಕನ್ನಡದ ಪ್ರಜ್ಞೆ. ಎಲ್ಲ ಭಾಷೆ ಕಲಿಯಬೇಕು. ಆದರೆ, ಕನ್ನಡವನ್ನು ಪೂಜಿಸಬೇಕು ಎಂದ ಅವರು, ಭಾಷೆಯೇ ಜ್ಞಾನವಲ್ಲ, ಭಾಷೆ ಜ್ಞಾನದ ವಾಹಿನಿ ಮಾತ್ರ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಕನ್ನಡ ಕಲಿಕೆಯ ಸ್ಥಿತಿ ಉತ್ತಮಗೊಳ್ಳುತ್ತದೆ ಎಂದರು.
ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ ಮಾತನಾಡಿ, ಸಾಹಿತಿಗಳು ಮತ್ತು ಕಲಾವಿದರೊಂದಿಗೆ ನಾಡಿನ ಹಿರಿಯ ಮಠಾಧೀಶರನ್ನು ಬರಮಾಡಿಕೊಂಡು ಗೌರವಿಸಿ, ಕನ್ನಡಾಭಿಮಾನ ಜಾಗೃತಿಗೊಳಿಸುವ ಕನ್ನಡ ನುಡಿಹಬ್ಬ ಎಲ್ಲ ಗ್ರಾಮಗಳಲ್ಲೂ ನಡೆಯಬೇಕೆಂದರು.
ಸಂಸ್ಕೃತಿಯ ಕೀಲಿ ಕೈ: ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಮಾತನಾಡಿ, ಎಷ್ಟೇ ಭಾಷೆ ಕಲಿತರೂ ಕನಿಷ್ಠ ಪಕ್ಷ ಮನೆಯಲ್ಲಾದರೂ ಮಾತೃಭಾಷೆಯಲ್ಲಿ ಮಾತನಾಡಬೇಕು. ಮಾತೃ ಭಾಷೆಯಲ್ಲೆ ಸಹಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕರುಳಿನ ನುಡಿ ಶ್ರೇಷ್ಠ. ಸಂಸ್ಕೃತಿಯ ಕೀಲಿ ಕೈ ಭಾಷೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಲಿಂಗದಹಳ್ಳಿಯ ಹಬ್ಬವಾಗಿ ಕನ್ನಡ ನುಡಿ ಹಬ್ಬವನ್ನು ಸಂಭ್ರಮಿಸುತ್ತಿರುವುದು ಮಾದರಿ. ಅವಸರದ ಬದುಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗೂ ಸಾಕಷ್ಟು ಅವಕಾಶ ನೀಡುವ ಮೂಲಕ ನಮ್ಮ ಜೀವನವನ್ನು ಹಸನುಗೊಳಿಸಿಕೊಳ್ಳಬಹುದೆಂದರು.
ಹೊಯ್ಸಳ ಕನ್ನಡ ಬಳಗದ ಅಧ್ಯಕ್ಷ ಕೆ.ಆರ್. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲೆ ಕನ್ನಡ ಬಳಕೆ ಸಾರ್ವತ್ರಿಕವಾಗಿದ್ದು, ಇಲ್ಲಿ ನುಡಿಹಬ್ಬಕ್ಕೆ ಸದಾ ಸ್ಪಂದನೆ ಸಿಗುತ್ತಿರುವುದೇ ಅದ್ಧೂರಿ ಆಚರಣೆಗೆ ಸಾಕ್ಷಿ ಎಂದರು.
ಚಲನಚಿತ್ರ ಹಿರಿಯ ನಟ ಶ್ರೀನಿವಾಸಮೂರ್ತಿ, ಸಾಹಿತಿ ಶಂಕರ ದೇವನೂರು, ಮಾಜಿ ಶಾಸಕ ಶಿವಶಂಕರಪ್ಪ, ತರೀಕೆರೆ ತಾಪಂ ಸದಸ್ಯರಾದ ಸೀತಾರಾಮ್ ಮತ್ತು ಬಿ.ಆರ್. ರವಿ, ಹೋಬಳಿ ಕಾಂಗ್ರೆಸ್ ಮುಖಂಡ ರಾಮಚಂದ್ರಪ್ಪ ಮಾತನಾಡಿದರು. ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ಚಂದ್ರಿಬಾಯಿ, ತಾಪಂ ಮಾಜಿ ಸದಸ್ಯ ಲೋಕೇಶ್, ಡಾ. ಉಮೇಶ್, ಸಿದ್ದರಾಮಪ್ಪ, ಡಾ. ಶಿವಪ್ರಕಾಶ್, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ, ಸ್ಥಳೀಯ ಮುಖಂಡ ಕೃಷ್ಣಪ್ಪ, ರುದ್ರೇಶ್, ಪ್ರಸನ್ನ ಮತ್ತು ಸುರೇಶ್ ವೇದಿಕೆಯಲ್ಲಿದ್ದರು. ವಕೀಲ ಪ್ರಕಾಶ ಸ್ವಾಗತಿಸಿ, ಶ್ರೀದೇವಿ ವೈಷ್ಣವಿತುಂಗಾ ಪ್ರಾರ್ಥಿಸಿ, ನಮನಾ ನಿರೂಪಿಸಿದರು.