ಶಿಕ್ಷಣ ಗುಣಾತ್ಮಕವಾಗಿ ಬದಲಾಗಲಿ: ಡಾ.ಶ್ರೀಕಂಠ ಕೂಡಿಗೆ
ತರೀಕೆರೆ: ಶಿಕ್ಷಣ ಗುಣಾತ್ಮಕವಾಗಿ ಬದಲಾವಣೆ ಮಾಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಶ್ರೀಕಂಠ ಕೂಡಿಗೆ ತಿಳಿಸಿದ್ದಾರೆ. ಪಟ್ಟಣದ ಎಸ್ಜೆಎಂ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶನಿವಾರ ಕಾಲೇಜು ಸಭಾಂಗಣದಲ್ಲಿ ಏರ್ಪಾಡಾಗಿದ್ದ ಕಾಲೇಜು ಪ್ರತಿಭಾ ಮಾಸಿಕ ಪತ್ರಿಕೆಯ 5ನೇ ವರ್ಷದ ವಿಶೇಷಾಂಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಜ್ಞೆಯೇ ಪ್ರತಿಭೆ ಆಗುತ್ತದೆ. ಪ್ರತಿಭೆಗೆ ನೂರಾರು ದಾರಿಗಳಿದೆ. ತನ್ನನ್ನು ತಾನೇ ನಿಯಂತ್ರಿಸುವ ಶಕ್ತಿ ಇರಬೇಕು. ವಿದ್ಯಾರ್ಥಿ ಜೀವನದಿಂದಲೇ ಅದು ಶುರುವಾಗಬೇಕು. ನಮ್ಮನ್ನು ನಾವೇ ಬೆಳೆಸಿಕೊಳ್ಳಬೇಕು. ಆದರೆ ಅದು ಈಗ ಆಗುತ್ತಿಲ್ಲ. ಕನಸುಗಳೇ ಇಲ್ಲದೆ ಇರುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ವಿಕಾಸದ ಮೂಲಕ ಆದವನು. ಓದು ಬಹಳ ಮುಖ್ಯ ಎಂದು ಅವರು ತಿಳಿಸಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಾಜು 'ಪ್ರತಿಭಾ' ಮಾಸಿಕ ಪತ್ರಿಕೆಯ 5ನೇ ವರ್ಷದ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿ, ಪ್ರತಿಭಾವಂತರನ್ನು ಹೊರತರಲು ಪ್ರಾಮಾಣಿಕವಾದ ಪ್ರಯತ್ನ ನಡೆದಿದೆ. ಪುಸ್ತಕ ಶಾಶ್ವತವಾದದ್ದು ಎಂದರು. ಪ್ರೊ. ಜಿ.ಎನ್. ಬಸವರಾಜಪ್ಪ ಮಾತನಾಡಿದರು. ಪ್ರಾಂಶುಪಾಲ ಪ್ರೊ. ಕೆ.ವಿ. ಸಜ್ಜನಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಹೆಗಡಾಳ್, ಶೃತಿ ಮಾತನಾಡಿದರು. ಕಾಲೇಜು ಸ್ಥಳೀಯ ಅಡಳಿತ ಮಂಡಳಿ ಸದಸ್ಯ ಬಿ.ವಿ. ಯೋಗೀಶ್, ಯುವಕವಿ ದಾದಾಪೀರ್, ಪ್ರೊ.ಕುಮಾರಪ್ಪ ಮತ್ತಿತರರು ಉಪಸ್ಥಿತರಿದ್ದರು.