'ಸಾತ್ವಿಕ ಆಹಾರದಿಂದ ಮನಸ್ಸು, ಶರೀರ ಪ್ರಫುಲ್ಲ'
ಚಿಕ್ಕಮಗಳೂರು: ಸಾತ್ವಿಕ ಆಹಾರ ಸೇವನೆಯಿಂದ ಮನಸ್ಸು ಮತ್ತು ಶರೀರ ಪ್ರಫುಲ್ಲಗೊಳ್ಳುತ್ತದೆ. ಭೋಜನ ಯಜ್ಞ ಇದ್ದಂತೆ, ಜಠರಾಗ್ನಿಯಾದರೆ ಅನ್ನ ಹವಿಸ್ಸು ಎಂದು ಪತಂಜಲಿ ಯೋಗ ಶಿಕ್ಷಣ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಕೆ. ನಾಗರಾಜಣ್ಣ ಹೇಳಿದ್ದಾರೆ.
ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿ ಗಾಯಿತ್ರಿದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಜಿಲ್ಲಾ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಭೋಜನ ಸ್ವೀಕಾರದ ರೀತಿ- ನೀತಿ ಅರಿಯುವ ಅಗತ್ಯವಿದೆ ಎಂದರು.
ಒಳ್ಳೆಯ ವರ್ತನೆ: ಸಾತ್ವಿಕ ಮನಸ್ಸಿನಿಂದ ಆಹಾರ ತಯಾರಿಸಿ, ಒಳ್ಳೆಯ ಮನಸ್ಥಿತಿಯಲ್ಲಿ ಬಡಿಸಿದ್ದನ್ನು ಸೇವಿಸುವುದರಿಂದ ಹಸಿವು ನೀಗುವುದರ ಜತೆಗೆ ಆನಂದ, ತೃಪ್ತಿ ನಮ್ಮದಾಗುತ್ತದೆ. ಒಳ್ಳೆಯ ಭಾವನೆಗಳು ಸ್ಫುರಿಸಲು ಸಾತ್ವಿಕ ಆಹಾರ ಅಗತ್ಯ. ಇದರಿಂದ ಒಳ್ಳೆಯ ವರ್ತನೆ, ಆಲೋಚನೆಗಳು ನಮ್ಮದಾಗುತ್ತವೆ. ಇಡೀ ಜಗತ್ತಿಗೆ ಸಂಸ್ಕೃತಿ-ಸಂಸ್ಕಾರ ಕೊಡುವ ಶಕ್ತಿ ಇರುವುದು ತಾಯಿಗೆ ಮಾತ್ರ. ತಾಯಿಯನ್ನು ಅನ್ನಪೂರ್ಣೇಶ್ವರಿ ರೂಪದಲ್ಲಿ ಕಾಣುತ್ತೇವೆ. ಪ್ರೀತಿ, ವಾತ್ಸಲ್ಯ, ಮಮತೆ, ಕರುಣೆ, ತಾಳ್ಮೆಯಿಂದ ತಾಯಿ ಕೊಡುವ ತುತ್ತು ಮನ, ಮನಸ್ಸನ್ನು ತುಂಬಿಸುತ್ತದೆ. ಕುಟುಂಬ ವ್ಯವಸ್ಥೆ ಇಂದು ಛಿದ್ರಗೊಳ್ಳುತ್ತಿದ್ದು, ಆಚಾರ, ವಿಚಾರ, ಆಚರಣೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಮಾತೃಭೋಜನ ಪರಂಪರೆಯ ಸ್ಮರಣೆ. ತಾಯಿ ಪ್ರೀತಿಯಿಂದ ವಂಚಿತರಾದವರು ಸಮಾಜಘಾತುಕರಾಗಿ ಪರಿವರ್ತನೆಗೊಳ್ಳುತ್ತಾರೆಂಬ ಮಾತಿದೆ. ತಾಯಿ ಒಳಿತನ್ನೆ ಕಲಿಸುತ್ತಾಳೆ. ಆದಿಶಂಕರಾಚಾರ್ಯರು ಆದಿಶಕ್ತಿ ರೂಪವಾಗಿ ಕಂಡಿದ್ದಾರೆ ಎಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಯೋಗ ಶಿಕ್ಷಣ ಸಮಿತಿ ಉಪಾಧ್ಯಕ್ಷೆ ಲತಿಷಿಯ ಜೇಮ್ಸ್ ಮಾತನಾಡಿದರು.
ನೇತ್ರಾ ವೆಂಕಟೇಶ್, ರೂಪಾ ಹೇಮಂತಪ್ರಭು, ದಾಕ್ಷಾಯಣಿ ವೇದಿಕೆಯಲ್ಲಿದ್ದರು. ನಗರ ಸಮಿತಿ ಮಹಿಳಾ ಕಾರ್ಯದರ್ಶಿ ಸುಮಿತ್ರಾ ನಾಗಪ್ಪಗೌಡ ಸ್ವಾಗತಿಸಿ, ಯೋಗಬಂಧು ನರಸಿಂಹರಾಜ್ ವಂದಿಸಿದರು. ಕೈತುತ್ತಿನ ಮಾತೃಭೋಜನದ ನಂತರ ನಡೆದ ಹರಟೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪೂಜಾರಿ ಹಿರೇಮಗಳೂರು ಕಣ್ಣನ್ ಸಂಸಾರ- ಸಂಸ್ಕಾರ ಕುರಿತಂತೆ ಮಾತನಾಡಿದರು.