ಕಳಪೆ ಕಾಮಗಾರಿ: ತನಿಖೆಗೆ ಆಗ್ರಹ
ಕ.ಪ್ರ.ವಾರ್ತೆ ತರೀಕೆರೆ ಜ.27
ಲಕ್ಕವಳ್ಳಿ ಭಾಗದಲ್ಲಿ ಸರ್ಕಾರ ಯಥೇಚ್ಛವಾಗಿ ಹಣ ಖರ್ಚು ಮಾಡಿ ನಿರ್ಮಾಣ ಮಾಡಿದ ಬಿಸಿಯೂಟ ತಯಾರಿಕೆ ಕಟ್ಟಡಗಳು, ಸಮುದಾಯ ಭವನ ಕಟ್ಟಡಗಳು ಅತ್ಯಂತ ಕಳಪೆ ಕಾಮಗಾರಿಯಿಂದ ಕೂಡಿದ್ದು, ಕೂಡಲೇ ಲೋಕಾಯುಕ್ತರಿಂದ ತನಿಖೆ ಮಾಡಿ ಎಂದು ಜಿಪಂ ಸದಸ್ಯ ಕೆ.ಪಿ. ಕುಮಾರ್ ಒತ್ತಾಯಿಸಿದರು.
ತಾಪಂ ಅಧ್ಯಕ್ಷೆ ಶಕುಂತಲ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ನೀರಿನಲ್ಲಿ ಹೋಮ: ಲಕ್ಕವಳ್ಳಿ ಭಾಗದಲ್ಲಿ ಕರಕುಚ್ಚಿ ಎ ಕಾಲೋನಿ ಮತ್ತು ಬಿ. ಕಾಲೋನಿಯಲ್ಲಿ ಬಿಸಿಯೂಟ ಕಟ್ಟಡಗಳು ಮೋಟು ಗೋಡೆಗಳಷ್ಟು ನಿರ್ಮಾಣವಾಗಿವೆ. ಕಟ್ಟಡ ಅರ್ಧಕ್ಕೆ ನಿಂತು ಎಷ್ಟೋ ತಿಂಗಳಾಯಿತು. ಅಪೂರ್ಣ ಕಾಮಗಾರಿಯಿಂದ ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯ ನಿರ್ವಹಣಾಧಿಕಾರಿ ದೇವರಾಜಪ್ಪ ಮಾತನಾಡಿ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡಬೇಕೆಂದು ಸೂಚಿಸಿದರು.
ಸಭೆ ಪ್ರಾರಂಭದಲ್ಲಿ ಸದಸ್ಯ ರಾಜಕುಮಾರ್ ಮಾತನಾಡಿ, ತಾಪಂಗೆ ಎಷ್ಟು ಅನುದಾನ ಬರುತ್ತದೆ, ಯಾವ್ಯಾವ ಯೋಜನೆಯಲ್ಲಿ ಬರುತ್ತದೆ, ತಾಲೂಕಿನ ಅಭಿವೃದ್ಧಿಗೆ 20 ಸದಸ್ಯರಿಗೂ ಅನುದಾನ ನೀಡಿದ ನಂತರ ಎಷ್ಟು ಹಣ ಉಳಿಯುತ್ತದೆ, ಆನುದಾನ ಖರ್ಚಾಗದೆ ಮಾರ್ಚ್ ನಂತರ ಎಷ್ಟು ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ ಎಂಬ ಬಗ್ಗೆ ವಿವರ ಕೊಡಿ ಎಂದು ಒತ್ತಾಯಿಸಿದರು.
ಸದಸ್ಯ ಸೀತಾರಾಮ್ ಮಾತನಾಡಿ, ಹಿಂದಿನ ಸಭೆಗಳ ನಡವಳಿ, ತೀರ್ಮಾನ ಓದಿ ರೆಕಾರ್ಡ್ ಮಾಡುವುದಿಲ್ಲ ಎಂದು ಆಕ್ಷೇಪಿಸಿದರು.
ತಾಪಂ ಅಧ್ಯಕ್ಷೆ ಶಕುಂತಲ ನಾಗರಾಜ್ ಮಾತನಾಡಿ, ಹಿಂದಿನ ಸಭೆಗಳ ನಡವಳಿ, ಕೈಗೊಂಡ ತೀರ್ಮಾನಗಳನ್ನು ಸಭೆಯ ಗಮನಕ್ಕೆ ತರಬೇಕು. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವಿದ್ಯುತ್ ಕೊಡಿ: ಸದಸ್ಯರಾದ ಎಲ್.ಎ. ಅನ್ಬು, ವಿಜಯಾನಾಯ್ಕ ಮಾತನಾಡಿ, ಬೇಸಿಗೆ ಸಮೀಪಿಸುತ್ತಿದೆ. ಕುಡಿಯುವ ನೀರಿಗೆ ಮತ್ತು ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಜಿಪಂ ಸದಸ್ಯ ಕೆ.ಪಿ. ಕುಮಾರ್ ಮಾತನಾಡಿದರು. ವಿವಿಧ ಇಲಾಖೆಯ ಚರ್ಚೆಯಲ್ಲಿ ತಾಪಂ ಸದಸ್ಯರು ಭಾಗವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಗೌರಮ್ಮ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ತಾಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.