ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಡಬ್ಬಿಂಗ್ ಷಡ್ಯಂತ್ರ ಕೈ ಬಿಡಿ

Vishwanath S
Updated On : 28 Jan 2014, 11:46 am

ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಜ.27
ಪರ ಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಬಾರದೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತ್ಯೇಕವಾಗಿ ಮೆರವಣಿಗೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಅವರಿಗೆ ಮನವಿ ಸಲ್ಲಿಸಿದರು.
ಮಾತೃ ಭಾಷೆಯನ್ನು ಕಡೆಗಣಿಸುವ ಉದ್ದೇಶದಿಂದ ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವ ತಂತ್ರಕ್ಕೆ ಮುಂದಾಗಿರುವ ಷಡ್ಯಂತ್ರವನ್ನು ಕೈಬಿಡದಿದ್ದರೆ ನಿರಂತರವಾಗಿ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಓರ್ವ ಕಲಾವಿದನ ಪ್ರತಿಭೆಯನ್ನು ಭಾಷೆ ಅನುಕರಣೆ ಮೂಲಕ ಕೆಲ ಕ್ಷಣಗಳು ಮಾತ್ರ ಜನರ ಮನಸೆಳೆಯಬಹುದೇ ಹೊರತು ಅದರಿಂದ ಪ್ರೀತಿ ವಿಶ್ವಾಸ ಗಳಿಸುತ್ತೇವೆಂಬುದು ಮೂರ್ಖತನ ಮತ್ತು ದುಪ್ಪಟ್ಟು ಹಣಗಳಿಸುವ ದುರದ್ದೇಶ. ಡಬ್ಬಿಂಗ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕೆಲವು ಸಾಹಿತಿಗಳು, ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರು ಇಂತಹ ಕೆಟ್ಟ ನಿರ್ಧಾರದಿಂದ ಹಿಂದೆ ಸರಿದು ಕನ್ನಡ ಭಾಷೆ, ನೆಲ, ಜಲವನ್ನು ಉಳಿಸಿವಂತಹ ಪ್ರಯತ್ನಕ್ಕೆ ಕೈ ಜೋಡಿಸಬೇಕೆಂದು ಆಗ್ರಹಿಸಿದ್ದಾರೆ.
ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿರುವ ಸಹ ಕಲಾವಿದರು ಸೇರಿದಂತೆ ಸಹಸ್ರಾರು ಚಿತ್ರ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗಿವೆ. ಸರ್ಕಾರ ಇದನ್ನು ಅರಿತು ಕನ್ನಡಕ್ಕೆ ಪರಭಾಷಾ ಚಿತ್ರಗಳನ್ನು ಡಬ್ಬಿಂಗ್ ಮಾಡುವ ಪ್ರಯತ್ನವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ, ಎಚ್.ಸಿ. ರಮೇಶ್, ಸುನೀಲ್, ಜಗದೀಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಎಲ್. ರುದ್ರೇಗೌಡ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ತರೀಕೆರೆಯಲ್ಲೂ ಪ್ರತಿಭಟನೆ
ತರೀಕೆರೆ: ಕರವೇ ವತಿಯಿಂದ ಸೋಮವಾರ, ಡಬ್ಬಿಂಗ್ ವಿರೋಧಿಸಿ ತರೀಕೆರೆ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರಿಗೆ ಮನವಿ ಪತ್ರ ನೀಡಿದೆ.
ವೇದಿಕೆ ಜಿಲ್ಲಾಧ್ಯಕ್ಷ ಜಿ.ಆರ್. ವಿಶ್ವನಾಥ್(ಕಾಶಿ) ಮಾತನಾಡಿ, ಕನ್ನಡ ಕಲಾವಿದರಿಗೆ ಅನ್ಯಾಯವಾಗುತ್ತದೆ. ಐವತ್ತು ವರ್ಷಗಳಿಂದ ಇಲ್ಲದ ಡಬ್ಬಿಂಗ್ ಇತ್ತೀಚಿನ ಎರಡು ವರ್ಷಗಳಲ್ಲಿ ಆರಂಭವಾಗಿದ್ದು, ಇದರಿಂದ ಕನ್ನಡಕ್ಕೆ ಧಕ್ಕೆಯಾಗುತ್ತದೆ. ಕನ್ನಡ ಕಲಾವಿದರಿಗೆ ಅನ್ಯಾಯವಾಗಿ, ಬೀದಿಗೆ ಬರುವಂತಾಗುತ್ತದೆ. ಆದ್ದರಿಂದ ಡಬ್ಬಿಂಗ್ ಬೇಡ ಎಂದರು.
ಯಾವುದೇ ಕಾರಣಕ್ಕೂ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗುವ ನೀತಿ ಜಾರಿಯಾಗಬಾರದು. ಒಂದುವೇಳೆ ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವೇದಿಕೆ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ವೇದಿಕೆ ಜಿಲ್ಲಾಧ್ಯಕ್ಷ ಜಿ.ಆರ್. ವಿಶ್ವನಾಥ (ಕಾಶಿ), ಹಿಂದುಳಿದ ವರ್ಗ ಒಕ್ಕೂಟದ ಜಿಲ್ಲಾಧ್ಯಕ್ಷ ಕಲ್ಲೇಶ್, ತಾಲೂಕು ಉಪಾಧ್ಯಕ್ಷ ಕಿರಣ್‌ಕುಮಾರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ನವೀನ್, ಟಿ.ಎನ್. ಗಿರೀಶ್‌ಕುಮಾರ್, ಟಿ.ಎನ್. ಅಭಿಷೇಕ್, ತಾಲೂಕು ಕಾರ್ಯಾಧ್ಯಕ್ಷ ರವೀಂದ್ರ, ಎನ್. ಮಂಜು (ಆಟೋ) ಮನವಿ ಪತ್ರ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement