ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮಾಜಮುಖಿ ಚಿಂತನೆಗೆ ಶಿಕ್ಷಣ ಅವಶ್ಯ

Vishwanath S
Updated On : 28 Jan 2014, 11:47 am

ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಜ.27
ಕನ್ನಡದ ಭಾಷೆಯಲ್ಲೇ ವಿಶೇಷ ಕಲೆಯಾಗಿರುವ ಗಮಕ ಕಲೆಯನ್ನು ಪಠ್ಯಾಧಾರಿತ ವಿಷಯವಾಗಿ ಸೇರಿಸಲಾಗಿದೆ ಎಂದು ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮ ಸುಬ್ರಾಯ ಶೇಟ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೋಮವಾರ ತಾಲೂಕು ಗಮಕ ಕಲಾ ಪರಿಷತ್ತಿನ ಆಶ್ರಯದಲ್ಲಿ ನಡೆದ ಪದವಿ ಪಠ್ಯಾಧಾರಿತ ಕಾವ್ಯಗಳ ಗಮಕ ವಾಚನ ಹಾಗೂ ವ್ಯಾಖ್ಯಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಮಕ ಕಲೆ ತರಬೇತಿ: ಶಿಕ್ಷಣದಲ್ಲಿ ಯೋಗ, ಗಮಕ ಕಲೆ ಅಳವಡಿಸಿದರೆ ವಿದ್ಯಾರ್ಥಿಗಳ ಜ್ಞಾನ ಭಂಡಾರ, ನೈತಿಕ ಪ್ರಜ್ಞೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಲಿದೆ. ಶಿಕ್ಷಣ ಎಂದರೆ ಕೇವಲ ಪ್ರಶ್ನೆಗಳಿಗೆ ಉತ್ತರಿಸುವ ಕಂಠಪಾಠ ಆಗಬಾರದು. ವಿದ್ಯಾರ್ಥಿಗಳ ಬದುಕು ಕಟ್ಟಿಕೊಳ್ಳುವ ಜೊತೆಗೆ ಸಮಾಜಮುಖಿ ಚಿಂತನೆ ಮಾಡುವ ಶಿಕ್ಷಣ ಈಗ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಗಮಕ ಕಲಾ ಪರಿಷತ್ತಿನ ಆಶ್ರಯದಲ್ಲಿ ಗಮಕ ಕಲೆ ಬಗ್ಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಗಮಕ ಕಲೆಯಲ್ಲಿ ವ್ಯಾಖ್ಯಾನ ಮಾತ್ರವಲ್ಲ. ಅದರ ಅರ್ಥ ಹಾಗೂ ಹಿನ್ನೆಲೆ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಣ್ಣಪ್ಪ ಎಸ್. ಮಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೇ ಕನ್ನಡದ ಕಾವ್ಯದಲ್ಲಿ ಮನುಷ್ಯನ ಬದುಕಿನ ಮೌಲ್ಯಗಳು ಪ್ರತಿಬಿಂಬಿಸಲಿದೆ. ಸಮಕಾಲೀನ ಪರಂಪರೆ ಬೆಳೆವಣಿಗೆಗೆ ಗಮಕ ವಾಚನ ಸಹಕಾರಿಯಾಗಲಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಪೂರ್ಣೇಶ್ ಅಧ್ಯಕ್ಷತೆ ಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಗಮಕ ಪರಿಷತ್ತಿನ ಅಧ್ಯಕ್ಷ ಸುಬ್ಬಣ್ಣ ನಾಡಿಗ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ಉಪಸ್ಥಿತರಿದ್ದರು.
ಸುರತ್ಕಲ್‌ನಲ್ಲಿ ಅಧ್ಯಾಪಕ ಹಾಗೂ ಗಮಕಿಗಳಾದ ಎಚ್.ಯಜ್ಞೇಶ್ ಗಮಕ ವಾಚನ ಮಾಡಿದರು. ಮೂಡಬಿದ್ರೆಯ ಜೈನ ಪ್ರೌಢಶಾಲೆ ಕನ್ನಡ ಭಾಷಾ ಅಧ್ಯಾಪಕ ಮುನಿರಾಜ ರೆಂಜಾಳ ವ್ಯಾಖ್ಯಾನಿಸಿದರು. ತಾಲೂಕು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಭಾಗ್ಯ ನಂಜುಂಡಸ್ವಾಮಿ, ಮಾರ್ಗದರ್ಶಕ ಎ.ಬುಜಂಗಾಚಾರ್ ಉಪಸ್ಥಿತರಿದ್ದರು.
ಅಂಕಿತ, ಲಕ್ಷ್ಮೀದೇವಿ ಪ್ರಾರ್ಥಿಸಿದರು. ಅನಿತಾ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement