ಅಸಂಘಟಿತ ಕಾರ್ಮಿಕರ ನೋಂದಣಿಗೆ ಚಾಲನೆ
ಕ.ಪ್ರ.ವಾರ್ತೆ , ಕಡೂರು , ಜ.28
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದ ಕಾರ್ಮಿಕರು, ವಾಹನ ಚಾಲಕರು, ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸ್ಥಳದಲ್ಲೇ ನೋಂದಾಯಿಸುವ ಕಾರ್ಯವನ್ನು ಕಾರ್ಮಿಕ ಇಲಾಖೆಯಿಂದ ಅವರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತು ಕೊಡಿಸುವ ಹಿನ್ನೆಲೆಯಲ್ಲಿ ಕಾರ್ಮಿಕ ಮಂಡಳಿ ಸ್ಥಳದಲ್ಲೇ ನೋಂದಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದು ಚಿಕ್ಕಮಗಳೂರು ವಿಭಾಗದ ಕಾರ್ಮಿಕ ಆಯುಕ್ತರಾದ ಶ್ರೀವಳ್ಳಿ ತಿಳಿಸಿದರು.ಪಟ್ಟಣದ ಎಪಿಎಂಸಿ ಸಮೀಪದ ಸಂತೆ ನಡೆಯುವ ಸ್ಥಳದ ಸಮೀಪದಲ್ಲೇ ಕಾರ್ಮಿಕ ಇಲಾಖೆ ಸಿಬ್ಬಂದಿಯೊಂದಿಗೆ ವಾಹನ ಚಾಲಕರು ಮತ್ತು ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೂ ನೋಂದಾವಣೆ ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಆರ್ಥಿಕ ನೆರವು: ಅಸಂಘಟಿತ ಕಾರ್ಮಿಕರ ಭದ್ರತೆಗಾಗಿ ರೂಪಿಸಿರುವ ರಾಷ್ಟ್ರೀಯ ನಿವೃತ್ತ ಯೋಜನೆ ಎನ್ಪಿಎಸ್ ಮತ್ತು ಖಾಸಗಿ, ವಾಣಿಜ್ಯ ವಾಹನ ಚಾಲಕರಿಗೆ ಉಚಿತ ಅಫಘಾತ ವಿಮೆ ಕಾರ್ಡುಗಳನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ. ಇದರೊಂದಿಗೆ ಕಾರ್ಮಿಕರಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆ ಸರ್ಕಾರದಿಂದ ದೊರಕುವ ಸೌಲಭ್ಯ ತಿಳಿಸಲಾಗುತ್ತಿದೆ. ಕಾರ್ಮಿಕರು ನೋಂದಾಯಿಸಿ ಸದಸ್ಯತ್ವ ಪಡೆದರೆ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದರೆ 40000 ದಿಂದ 60000 ವರೆಗೆ ಧನ ಸಹಾಯ ಚಿಕಿತ್ಸೆ ವೆಚ್ಚ ಭರಿಸಲಾಗುವುದು ಎಂದು ತಿಳಿಸಿದರು.ಕಾರ್ಮಿಕರಿಗೆ ಅಪಘಾತ ಸಂಭವಿಸಿ ಮರಣಿಸಿದಾಗ ಅಥವಾ ಅಂಗವಿಕಲರಾದಲ್ಲಿ 50000, ಮೃತರಾದರೆ ಕುಟುಂಬಕ್ಕೆ 1.50 ಲಕ್ಷ ಮೊತ್ತವನ್ನು ಅಂಚೆ ಕಚೇರಿಯಲ್ಲಿ ಠೇವಣಿ ಮಾಡಿ ಮಾಸಿಕ ವರಮಾನ ಯೋಜನೆಯಲ್ಲಿ ಹಣ ನೀಡಲಾಗುವುದು ಎಂದರು.ಆರೋಗ್ಯ-ಶಿಕ್ಷಣ: ಹೃದಯ, ಕಿಡ್ನಿ, ಕ್ಯಾನ್ಸರ್, ಕಣ್ಮಿನ ಚಿಕಿತ್ಸೆ, ಪಾರ್ಶ್ವವಾಯು, ಗರ್ಭಕೋಶ ಚಿಕಿತ್ಸೆ, ಅಸ್ತಮಾ, ಡಯಾಲಿಸಿಸ್ ಚಿಕಿತ್ಸೆಗಳಿಗೆ 2 ಲಕ್ಷವರೆಗೂ ಧನಸಹಾಯ ನೀಡಲಾಗುವುದು. ಸದಸ್ಯತ್ವ ಪೂರ್ಣಗೊಂಡ ಸದಸ್ಯರಿಗೆ 15 ಸಾವಿರ ಮಹಿಳಾ ಫಲಾನುಭವಿಗಳಿಗೆ ಹೆರಿಗೆ ಸೌಲಭ್ಯಕ್ಕೆ 2 ಬಾರಿ ಹಣ ನೀಡಲಾಗುವುದು ಎಂದರು.ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ 5, 6, 7ನೇ ತರಗತಿಗೆ ವರ್ಷಕ್ಕೆ 2000, 8, 9ನೇ ತರಗತಿ ಮಕ್ಕಳಿಗೆ ್5000, 10ನೇ ತರಗತಿ ಹಾಗೂ ಪಿಯುಸಿ, ಐಟಿಐ, ಡಿಪ್ಲೊಮೊ, ಪದವಿ ಓದುತ್ತಿರುವ ಕಾರ್ಮಿಕರ ಮಕ್ಕಳಿಗೆ ಪ್ರತೀ ವರ್ಷ 5000, ಸ್ನಾತಕ್ಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗೆ ಪ್ರತೀ ವರ್ಷ 15000 ನೀಡಲಾಗುವುದು ಎಂದು ವಿವರಿಸಿದರು.ಕಾರ್ಡ್ ಪಡೆಯಿರಿ: ಇಬ್ಬರು ಮಕ್ಕಳ ಮದುವೆಗೆ 50000 ಧನಸಹಾಯ, 32 ವರ್ಷ ಸದಸ್ಯತ್ವ ಪೂರ್ಣಗೊಂಡವರಿಗೆ 5000, ಉಪಕರಣಗಳ ಖರೀದಿಗೆ ಧನಸಹಾಯ, 5 ವರ್ಷ ಪೂರ್ಣಗೊಂಡವರಿಗೆ ಮಾಹೆಯಾನ 500 ಪಿಂಚಣಿ, ಮನೆ ಖರೀದಿಸಲು 50000 ಧನಸಹಾಯ ನೀಡಲಾಗುವುದು. ಆದ್ದರಿಂದ ಕಟ್ಟಡ ಕಾರ್ಮಿಕರು ವಾಹನ ಚಾಲಕರು ನೋಂದಾವಣೆ ಮಾಡಿಕೊಂಡು ಸಂಬಂಧಿಸಿದ ಕಾರ್ಡ್ ಪಡೆಯುವಂತೆ ಶ್ರೀವಳ್ಳಿ ಮನವಿ ಮಾಡಿದರು.ಚಿಕ್ಕಮಗಳೂರು ಜಿಲ್ಲಾ ಕಾರ್ಮಿಕ ಜಿಲ್ಲಾಧಿಕಾರಿ ಮಹಮದ್ ಫಜರುಲ್ಲಾ, ಕಡೂರು ಕಾರ್ಮಿಕ ನಿರೀಕ್ಷಕರ ಮಹದೇವಪ್ಪ, ಚಿಕ್ಕಮಗಳೂರು ಅಧಿಕಾರಿ ಮೇರಿ ಡಯಾಸ್ ಮತ್ತು ಸಿಬ್ಬಂದಿ ವರ್ಗದವರಿದ್ದರು.