ಅಹಂಕಾರ ಬಿಟ್ಟರೆ ಸಾಧನೆಗೆ ಹಾದಿ ಸುಗಮ: ಭಟ್
ಚಿಕ್ಕಮಗಳೂರು: ಸಾಮಾನ್ಯ ಮನುಷ್ಯ ಕಿರ್ತನೆ ರಚನೆ ಮಾಡುತ್ತಾನೆ. ಆದರೆ ಉಪಾಸಕರು ರಚನೆ ಮಾಡಿದಂತ ಕೀರ್ತನೆಯಲ್ಲಿ ಶಾಶ್ವತತೆ, ಶ್ರೇಷ್ಠತೆ, ಭಾವ ಮತ್ತು ಭಗವಂತನ ಸಾಹಿತ್ಯತೆ ಅಡಗಿರುತ್ತದೆ ಎಂದು ವಿದ್ವತ್ ಶ್ರೀಕಂಠ ಭಟ್ ಹೇಳಿದ್ದಾರೆ.
ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀತ್ಯಾಗರಾಜರು ಮತ್ತು ಶ್ರೀಪುರಂದರ ದಾಸರ ಜಯ್ಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಗೀತ, ಸಾಹಿತ್ಯ, ಜ್ಯೋತಿಷ್ಯ ಅಧ್ಯಯನ ಮಾಡಿ ಕೀರ್ತನೆ ರಚಿಸಿ, ನಿತ್ಯ 1 ಲಕ್ಷದ 25 ಸಾವಿರದಂತೆ ಒಟ್ಟಾರೆ 96 ಕೋಟಿ ರಾಮನಾಮವನ್ನು ಜಪಿಸಿದ ತ್ಯಾಗರಾಜರು, ಸಂಗೀತ ಸೇವೆ ಶ್ರೀರಾಮನಿಗೆ ಹೊರತು ಮನುಷ್ಯರಿಗಲ್ಲ ಎಂದು ಹೇಳಿದ್ದರು. ರಾಮನ ಸಾಹಸ, ಕಾರ್ಯವನ್ನು ಸಾರುವ 24 ಸಾವಿರ ಕೀರ್ತನೆ ರಚಿಸಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ ತ್ಯಾಗಮಯಿ ಎಂದು ತಿಳಿಸಿದರು.
ಜಯ್ಯಂತ್ಯುತ್ಸವ ಉಪ ಸಮಿತಿ ಅಧ್ಯಕ್ಷ ಎಸ್. ಶಂಕರನಾರಾಯಣ ಭಟ್ ಮಾತನಾಡಿ, ಭಗವಂತ ಸಂಗೀತ ಪ್ರೀಯ. ನದಿ, ಹಳ್ಳ, ಕೊಳ್ಳಗಳು, ಹಕ್ಕಿ ಸೇರಿದಂತೆ ಪ್ರಕೃತಿಯಲ್ಲಿ ಕೂಡ ಸಂಗೀತದ ಮಾದುರ್ಯವಿರುತ್ತದೆ. ನಾನು ಎಂಬ ಅಹಂಕಾರ ಬಿಟ್ಟು ಕೆಲಸ ಮಾಡಿದರೆ ಸಾಧನೆಗೆ ಹಾದಿ ಸುಗಮವಾಗುತ್ತದೆ ಎಂದರು.
ಎಂಇಎಸ್ ಸಂಸ್ಥೆಯ ಸದಸ್ಯೆ ಜಯಶ್ರೀ ಜೋಷಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಉಪ ಪ್ರಾಂಶುಪಾಲ ಪದ್ಮೇಗೌಡ, ಗಂಗಾಧರ ಅರಾಧ್ಯ, ಹೇಮಾವತಿ, ರೂಪ, ವ್ಯವಸ್ಥಾಪಕಿ ಶಾಂತಕುಮಾರಿ ಹಾಜರಿದ್ದರು.