ಕನ್ನಡ ಸಾರಸ್ವತ ಲೋಕಕ್ಕೆ ಕವಿಗಳ ಕೊಡುಗೆ ಅಪಾರ
ಕ.ಪ್ರ.ವಾರ್ತೆ ಟಿ ಕಡೂರು ಟಿ ಜ.28
ನಾವು ಕನ್ನಡಿಗರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕಿದ್ದು, ಪ್ರಪಂಚವೇ ಕರ್ನಾಟಕದ ಸಾಧನೆ ಶಿಖರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೋಡುತ್ತಿರುವಾಗ ಕೆಲವರು ನಾವು ಕನ್ನಡಿಗರು ಎಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿರುವುದು ನಾಚಿಕೆಗೇಡು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಡಾ ಶಿವಮೊಗ್ಗ ಸುಬ್ಬಣ್ಣ ಹೇಳಿದರು.
ಅವರು ಕಡೂರಿನ ಎಂ.ಆರ್.ಎಂ. ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಜಿ.ಎಸ್.ಎಸ್. ಗೀತನಮನ ಕಾರ್ಯಕ್ರಮ ಉದ್ಘಾಟಿಸಿ ವಿಜೇತ ಶಾಲಾ ಮಕ್ಕಳಿಗೆ ಪ್ರಶಸ್ತಿ ನೀಡಿ ಮಾತನಾಡಿದರು.
ಕವಿಗಳ ಕೊಡುಗೆ ಅಪಾರ: ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ಆದರೆ ನಿದ್ದೆ ಮಾಡುತ್ತಿರುವವರಂತೆ ನಟಿಸುತ್ತಿರುವರನ್ನು ಎಚ್ಚರಿಸಲಾಗದು. ಕನ್ನಡ ಸಾರಸ್ವತ ಲೋಕದಲ್ಲಿ ಕವಿಗಳ ಕೊಡುಗೆ ಅಪಾರ ಅವರ ಕವಿತೆಗಳು ಆದರ್ಶಗಳನ್ನು ಬಿಂಬಿಸುತ್ತವೆ. ನಮ್ಮ ಕನ್ನಡದ ರಾಷ್ಟ್ರಕವಿ ಶಿವರುದ್ರಪ್ಪನವರು ತಮ್ಮ ಕವಿತೆಗಳಲ್ಲಿ ಆದರ್ಶದ ಜೊತೆ ಜನರ ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಪಡಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಕನ್ನಡ ಕಂಡ ಅಪೂರ್ವ ಸಮನ್ವಯ ಕವಿ ಡಾ ಜಿ.ಎಸ್.ಎಸ್. ಮತ್ತ್ತುಮಹಾಕವಿ ಕುವೆಂಪು ಇಬ್ಬರೂ ನಮ್ಮ ಜಿಲ್ಲೆಯ ಅಳಿಯಂದಿರು ಎಂಬುದು ಹೆಮ್ಮೆಯ ವಿಷಯ ಎಂದು ಹೇಳ್ದರು.
ಅನಾವರಣ: ನಮ್ಮ ಬಯಲು ನಾಡಿನ ಶಾಲೆಯ ಪ್ರತಿಭೆಗಳು ಇಲ್ಲಿ ಅನಾವರಣಗೊಂಡಿವೆ. ಮುಂದಿನ ಹಬ್ಬಗಳಲ್ಲಿ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳ ಸೇರಿ ಒಂದೆಡೆ ಕಾರ್ಯಕ್ರಮ ಆಚರಿಸುವ ಯೋಚನೆಯಿದೆ ಎಂದರು.
ಜೆ.ಎಸ್.ಎಸ್. ಅವರ ಆಯ್ದ ಕವಿತೆಗಳನ್ನು ಚಿಕ್ಕಮಗಳೂರಿನ ರಶ್ಮಿ ಮಂಜುನಾಥ್, ಹರ್ಷ ಮತು ಎಚ್. ಎಂ. ನಾಗರಾಜರಾವ್ ಹಾಡಿದರು.
ತಹಸೀಲ್ದಾರ್ ತಿಮ್ಮಾಭೋವಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಮೂಕಪ್ಪ ಗೌಡ, ಡಾ ಎಸ್.ಕೆ. ಪ್ರಭು, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ತಮ್ಮಯ್ಯ ಮೊದಲಾದವರು ಉಪಸ್ಥಿತರಿದ್ದರು.