ಸಿಟಿ ಬಸ್ ಸಂಚಾರಕ್ಕೆ ಆಟೋ ಚಾಲಕರ ವಿರೋಧ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಜ.28
ನಗರದಲ್ಲಿ ಆರಂಭಗೊಂಡಿರುವ ಕೆಎಸ್ಆರ್ಟಿಸಿ ಬಸ್ಸು ಸಂಚಾರ ಸ್ಥಗಿತಗೊಳಿಸುವಂತೆ ಆಟೋ ಚಾಲಕರು ಮತ್ತು ಮಾಲೀಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್. ಅನಿಲ್ ಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
3500 ಆಟೋ: ನಗರದಲ್ಲಿ ಸುಮಾರು 3,500 ಆಟೋಗಳಿದ್ದು, ಈ ಆಟೋಗಳನ್ನು ನಬಿಕೊಂಡು ಸುಮಾರು ಐದಾರೂ ಸಾವಿರ ಜನರು ಜೀವನ ನಡೆಸುತ್ತಿದ್ದಾರೆ. ನಗರದಲ್ಲಿ ಹೊಸದಾಗಿ ಸಿಟಿಬಸ್ಗಳನ್ನು ಬಿಟ್ಟಿದ್ದರಿಂದ ಚಾಲಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಕೂಡಲೇ ಸಿಟಿಬಸ್ ಸಂಚಾರ ಸ್ಥಗಿತಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಹೊಸ ಸಿಟಿಬಸ್ಗಳನ್ನು ಸಂಚಾರಕ್ಕೆ ಬಿಡುವ ಮೊದಲು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಈ ಕುರಿತು ಆಟೋ ಚಾಲಕರು ಮತ್ತು ಮಾಲೀಕರೊಂದಿಗೆ ಚರ್ಚಿಸಬೇಕು. ಆದರೆ, ಈ ಬಗ್ಗೆ ಸಭೆ ಕರೆಯದೇ ದಿಢೀರನೆ ಸಿಟಿ ಬಸ್ ಸಂಚಾರ ಆರಂಭಿಸಿರುವುದು ಸರಿಯಾದ ಕ್ರಮವಲ್ಲ. ಸಿಟಿಬಸ್ ಬಿಟ್ಟಿದ್ದರಿಂದ ಆಟೋ ಚಾಲಕರಿಗೆ ಅನನುಕೂಲವಾಗುತ್ತಿದೆ. ಈ ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದರ ಹೆಚ್ಚಳ: ಸಾರಿಗೆ ಪ್ರಾಧಿಕಾರದ ಸಭೆ ನಡೆದು ಸುಮಾರು ಒಂದೂವರೆ ವರ್ಷ ಕಳೆದಿದೆ. ಈವರೆಗೆ 15 ರಿಂದ 16 ಬಾರಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಗ್ಯಾಸ್ ದರ ಹೆಚ್ಚಳವಾಗಿದ್ದರೂ ಸಾರಿಗೆ ಪ್ರಾಧಿಕಾರದ ಸಭೆ ನಡೆಸಿ ಆಟೋ ರಿಕ್ಷಾದ ದರವನ್ನು ಹೆಚ್ಚಿಸಿರುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ಹಾಗೂ ಆಟೋ ಚಾಲಕರಿಗೆ ಮತ್ತು ಮಾಲೀಕರ ನಡುವೆ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಕೂಡಲೇ ಸಾರಿಗೆ ಪ್ರಾಧಿಕಾರದ ಸಭೆ ಕರೆದು ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಟೋ ಸಂಚಾರ ಸ್ಥಗಿತ: ಕೂಡಲೇ ಸಿಟಿ ಬಸ್ಸು ಸಂಚಾರ ಸ್ಥಗಿತಗೊಳಿಸದೆ ಹೋದರೆ ಫೆ. 4ರ ಮಧ್ಯರಾತ್ರಿಯಿಂದ ನಗರದಲ್ಲಿ ಆಟೋ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಸಿ. ಬಸವರಾಜು, ಪ್ರಧಾನ ಕಾರ್ಯದರ್ಶಿ ಜಿ. ವಿನಯ್ ಹಾಗೂ ಆಟೋ ಚಾಲಕರು ಹಾಜರಿದ್ದರು.