ಗುಡ್ಡೇಹಳ್ಳ ಸಮೀಪ ಆಟೋ ಪಲ್ಟಿ: ಚಾಲಕ ಸಾವು
ನರಸಿಂಹರಾಜಪುರ: ಗುಡ್ಡೇಹಳ್ಳ ಸಮೀಪದ ಮುಖ್ಯ ರಸ್ತೆಯಲ್ಲಿ ಬುಧವಾರ ಸಂಜೆ 7.30 ಗಂಟೆಗೆ ಆಟೋ ಪಲ್ಟಿಯಾಗಿ ರಾಜೇಂದ್ರ (38) ಎಂಬ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕುದುರೆಗುಂಡಿಯಲ್ಲಿ ಆಟೋ ಓಡಿಸುತ್ತಿದ್ದ ಕೆರೆಗದ್ದೆಯ ರಾಜೇಂದ್ರ ಆಟೋದಲ್ಲಿ ಹೋಗುತ್ತಿದ್ದಾಗ ಶೇಡಗಾರು ಬಸ್ಸು ನಿಲ್ದಾಣದ ಸಮೀಪ ಆಟೋ ಪಲ್ಟಿಯಾಗಿ ಆಟೋ ಕೆಳಗೆ ಸಿಕ್ಕಿ ಮೃತಪಟ್ಟಿದ್ದಾನೆ.
ಅಪಘಾತ: ದಂಪತಿಗೆ ಗಾಯ
ನರಸಿಂಹರಾಜಪುರ: ಕುದುರೆಗುಂಡಿ ಸಮೀಪದ ಆರ್ಡಕ್ ಎಸ್ಟೇಟ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಮೋಟಾರ್ ಬೈಕ್ ಮತ್ತು ಕ್ಯಾಂಟರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಹೆಮ್ಮೂರು ಗ್ರಾಮದ ಪ್ರಶಾಂತ್ ಮತ್ತು ಪಲ್ಲವಿ ಎಂಬ ದಂಪತಿಗಳಿಗೆ ತೀವ್ರ ಪೆಟ್ಟಾದ ಘಟನೆ ಬುಧವಾರ ಸಂಜೆ ನಡೆದಿದೆ.
ಕುದುರೆಗುಂಡಿಯಿಂದ ನರಸಿಂಹರಾಜಪುರದ ಕಡೆಗೆ ಬರುತ್ತಿದ್ದ ಮೋಟಾರ್ ಬೈಕ್‌ಗೆ ನರಸಿಂಹರಾಜಪುರದ ಕುದುರೆಗುಂಡಿ ಕಡೆಗೆ ಸಾಗುತ್ತಿದ್ದ ಕ್ಯಾಂಟರ್ ವಾಹನವು ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್‌ನಲ್ಲಿದ್ದ ಪ್ರಶಾಂತ ಅವರಿಗೆ ಕೈಗೆ ಪೆಟ್ಟಾಗಿದ್ದು ಪಲ್ಲವಿಗೆ ತಲೆಗೆ ಪೆಟ್ಟಾಗಿದೆ. ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ.
ಕೃಷಿ ಉಪಕರಣ ಭಸ್ಮ
ಮೂಡಿಗೆರೆ: ಇಲ್ಲಿನ ಕೋರ್ಟ್ ಸಮೀಪದ ಅಗ್ರಿಮಾರ್ಟ್ ಕೃಷಿ ಉಪಕರಣ ಮಾರಾಟ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರು. ಬೆಲೆ ಬಾಳುವ ಕೃಷಿ ಉಪಕರಣಗಳು ಸುಟ್ಟುಹೋಗಿವೆ. ಬೆಳಗ್ಗೆ 7.30ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಅಗ್ನಿಶಾಮಕ ದಳಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಲಾಯಿತು. ಸಿಬ್ಬಂದಿ ಬೆಂಕಿ ನಂದಿಸಿದರು. ಮೂಡಿಗೆರೆ ಠಾಣಾಧಿಕಾರಿ ಅನಂತಪದ್ಮನಾಭ್ ಅನಾಹುತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.