ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತೊಟ್ಟಿ ನಿರ್ಮಾಣ ಸ್ಥಳ ಬದಲಾಯಿಸಲು ಆಗ್ರಹ

Lingaraj Badiger
Updated On : 30 Jan 2014, 10:29 am

ಚಿಕ್ಕಮಗಳೂರು: ಹಿರೇಮಗಳೂರು ಪರಿಶಿಷ್ಟರ ಕಾಲೋನಿಗೆ ಸಮೀಪದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಒಳಚರಂಡಿ ತ್ಯಾಜ್ಯ ಸಂಗ್ರಹ ತೊಟ್ಟಿ ನಿರ್ಮಾಣದ ಉದ್ದೇಶಿತ ಸ್ಥಳವನ್ನು ಬದಲಿಸುವಂತೆ ಒತ್ತಾಯಿಸಿ ನಗರಸಭಾ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಅವರು ಜಿಲ್ಲಾಧಿಕಾರಿ ಶೇಖರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಪರಿಶಿಷ್ಟರ ಕಾಲೋನಿಗೆ ಹೊಂದಿಕೊಂಡಂತೆ ತೊಟ್ಟಿ ನಿರ್ಮಾಣ ಮಾಡುವುದರಿಂದ ಅನೇಕ ಬಗೆಯ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ತೊಟ್ಟಿ ನಿರ್ಮಾಣದಿಂದ ಧಕ್ಕೆ: ಉದ್ದೇಶಿತ ಸ್ಥಳದಿಂದ ಕೇವಲ ಒಂದು ನೂರು ಮೀಟರ್ ದೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಶಾಲೆ, ಕಲ್ಯಾಣ ಮಂಟಪ, ರಾಜ್ಯ ಹೆದ್ದಾರಿ, ಬಸ್ ನಿಲುಗಡೆ ಪ್ರದೇಶವಿದೆ. ಉದ್ದೇಶಿದ ಜಮೀನಿನಲ್ಲಿ ಭೂತರಾಯನ ದೇವಸ್ಥಾನವಿದೆ. ಅದಕ್ಕೆ ಹೊಂದಿಕೊಂಡಂತೆ ನೂರಾರು ವರ್ಷಗಳ ಕುಡಿಯುವ ನೀರಿನ ಬಾವಿ ಇದೆ. ಈವೆಲ್ಲದಿಕ್ಕೆ ತೊಟ್ಟಿ ನಿರ್ಮಾಣದಿಂದ ತೀವ್ರ ಧಕ್ಕೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಉತ್ತರಿಸಿದ ಡಿಸಿ, ಗ್ರಾಮಕ್ಕೆ ಯಾವುದೇ ವಿಧದಲ್ಲೂ ತೊಂದರೆಯಾಗದ ಸ್ಥಳದಲ್ಲಿ ತೊಟ್ಟಿ ನಿರ್ಮಾಣಕ್ಕೆ ಸಮೀಕ್ಷೆ ನಡೆಸುವಂತೆ ಸ್ಥಳದಲ್ಲಿದ್ದ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೈದೇಹಿ ಅವರಿಗೆ ಸೂಚಿಸಿದರು.
ವಕೀಲ ಎಚ್.ಎಂ. ಶಿವಣ್ಣ, ಜಿಲ್ಲಾ ದೇವಾಂಗ ಸಂಘ ಅಧ್ಯಕ್ಷ ಎಚ್.ಎಂ. ನಾರಾಯಣ, ಆಶ್ರಯ ಸಮಿತಿ ಮಾಜಿ ಸದಸ್ಯ ಚಂದ್ರಪ್ಪ, ಯುವಕ ಸಂಘ ಅಧ್ಯಕ್ಷ ಕೇಶವಮೂರ್ತಿ ಸಮಸ್ಯೆ ಬಗ್ಗೆ ಗಮನ ಸೆಳೆದರು. ಶ್ರೀದೇವಿ ಯುವಕ ಸಂಘ ಅಧ್ಯಕ್ಷ ಬಿ.ಎನ್. ಮೋಹನ್ ಕುಮಾರ್, ಐಡಿಎಜಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಆರ್. ವಿಜಯನ್, ಡಾ. ಬಿ.ಆರ್. ಅಂಬೇಡ್ಕರ್ ಯುವ ಅಭಿವೃದ್ಧಿ ಸಂಘ ಅಧ್ಯಕ್ಷ ಎಚ್.ಸಿ. ಗಂಗಾಧರ್, ಮುಖಂಡರಾದ ಸಿ.ಎಸ್. ದಯಾನಂದನಾಯ್ಡು, ಇಬ್ರಾಹಿಂ, ಅಂಜುಪಾಷ, ನವೀದ್, ಆರ್.ಐ. ಹೇಮಂತಕುಮಾರ್ ಹಾಜರಿದ್ದರು.
ದೇವಾಲಯಕ್ಕೆ ಡಿಸಿ ಭೇಟಿ:  ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಬುಧವಾರ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು.
ದೇವಾಲಯ ಪರವಾಗಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಜಿಲ್ಲಾಧಿಕಾರಿ ಅವರನ್ನು ಗೌರವಿಸಿದರು. ದೇವಾಲಯಕ್ಕೆ ಸುಣ್ಣಬಣ್ಣ ಬಳಿಯುವುದು ಮತ್ತು ಕೆಲ ಸಣ್ಣಪುಟ್ಟ ದುರಸ್ತಿ ಕಾರ್ಯಗಳ ಕುರಿತು ಗ್ರಾಮಸ್ಥರು ಮಾಡಿಕೊಂಡ ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಶೇಖರಪ್ಪ, ದೇವಾಲಯದ ಮೂಲಕ ಯಾವುದೇ ರೀತಿಯಿಂದಲೂ ತೊಂದರೆಯಾಗದ ರೀತಿಯಲ್ಲಿ ದುರಸ್ತಿಗೊಳಿಸಬೇಕು. ದುರಸ್ತಿಗೆ ಮೊದಲು ತಜ್ಞರ ಸಲಹೆ ಪಡೆದುಕೊಳ್ಳುವಂತೆ ತಹಸೀಲ್ದಾರ್ ಶಿವೇಗೌಡರಿಗೆ ಸೂಚಿಸಿದರು.
ಮಾರ್ಚ್‌ನಲ್ಲಿ ನಡೆಯಲಿರುವ ರಥೋತ್ಸವಕ್ಕೆ ಮೊದಲು ದೇವಾಲಯದ ಸುತ್ತ ರಥ ಚಲಿಸುವ ಮಾರ್ಗದ ಡಾಂಬರೀಕರಣಕ್ಕೆ ಒತ್ತಾಯಿಸಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಫೋನಾಯಿಸಿದ ಜಿಲ್ಲಾಧಿಕಾರಿ, ರಸ್ತೆ ಡಾಂಬರೀಕರಣಕ್ಕೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement