ಫೆ.2ರಂದು ಶನೈಶ್ಚರ ದೇಗುಲ ಲೋಕಾರ್ಪಣೆ
ಕೊಪ್ಪ: ತಾಲೂಕಿನ ಬಾಳಗಡಿ ಮೇಲ್ಪಾಲ್ ರಸ್ತೆಯ ಸಮೀಪದಲ್ಲಿ ಫಾಲ ಚಂದ್ರಯಜ್ಞ ಕ್ಷೇತ್ರ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ಶನೈಶ್ಚರ ದೇಗುಲವನ್ನು ಫೆ.2ರಂದು ಶೃಂಗೇರಿ ಭಾರತೀತೀರ್ಥ ಮಹಾಸ್ವಾಮಿಗಳು ಮಹಾಕುಂಭಾಭಿಷೇಕ ನೆರವೇರಿಸಿ ಲೋಕಾರ್ಪಣೆ ಮಾಡಿಲಿದ್ದಾರೆ ಎಂದು ಟ್ರಸ್ಟ್ನ ಅಧ್ಯಕ್ಷ ಸತೀಶ್ ಭಟ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿ ಜಗದ್ಗುರುಗಳ ಆಶೀರ್ವಾದದಿಂದ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಜನರ ಕಷ್ಟಗಳ ನಿವಾರಣೆಗೆ ಶನೈಶ್ಚರ ದೇವಸ್ಥಾನ ಅಗತ್ಯವಿದೆ ಎಂದು ಅರಿತು ಈ ದೇಗುಲ ನಿರ್ಮಿಸಲಾಗಿದೆ. ಇದರ ಜೊತೆಗೆ ಮಹಾಗಣಪತಿ, ದುರ್ಗಾಪರಮೇಶ್ವರಿ ದೇವಸ್ಥಾನ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ವಿಶಾಲವಾದ ಭಾರತೀತೀರ್ಥ ಸಭಾಭವನ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ಜ.31 ರಿಂದ ಪ್ರಾರಂಭವಾಗಿದ್ದು, ಫೆ.2ರಂದು ಶೃಂಗೇರಿ ಶ್ರೀಗಳು ದೇವಸ್ಥಾನಗಳ ಮಹಾಕುಂಭಾಭಿಷೇಕ ನೇರವೇರಿಸಲಿದ್ದಾರೆ. ಮಾಜಿ ರಾಜ್ಯಪಾಲ ಡಾ. ರಾಮಾಜೋಯಿಸ್ ಸಭಾ ಭವನ ಉದ್ಘಾಟಿಸುವರು. ಮುಖ್ಯಅಥಿಗಳಾಗಿ ಡಾ. ವಿ.ಆರ್. ಗೌರಿಶಂಕರ್ ಭಾಗವಹಿಸಲಿರುವರು.
ವಿಶೇಷ ಆಹ್ವಾನಿತರಾಗಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಶಾಸಕ ಡಿ.ಎನ್. ಜೀವರಾಜ್, ಮುಂಬಯಿ ಉದ್ಯಮಿ ಆರ್.ಕೆ. ಶೆಟ್ಟಿ ಸೇರಿದಂತೆ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.