ನಗರ ಸ್ವಚ್ಛತೆಗೆ ಮಾಂಸದಂಗಡಿ ಎತ್ತಂಗಡಿ
ಚಿಕ್ಕಮಗಳೂರು: ನಗರದ ಹೃದಯ ಭಾಗದ ವಿವಿಧೆಡೆ ಇದ್ದ ಮಾಂಸ ಮಾರಾಟದ ಅಂಗಡಿಗಳನ್ನು ಮಂಗಳವಾರ ನಗರಸಭೆಯವರು ತೆರವುಗೊಳಿಸಿದರು.
ನಗರದ ಸ್ವಚ್ಚತೆ ದೃಷ್ಟಿಯಿಂದ ಹಾಗೂ ಮಾಂಸ ಮಾರಾಟದ ಅಂಗಡಿಗಳು ಒಂದೆಡೆ ಇರಬೇಕೆಂಬ ಉದ್ದೇಶದಿಂದ ನಗರಸಭೆ ಸಂತೆ ಮಾರುಕಟ್ಟೆ ಬಳಿ ಮಾಂಸ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.
ಎರಡು ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣ ಮಾಡಿ 42 ಮಳಿಗೆಗಳನ್ನು ತೆರೆಯಲಾಗಿದೆ. ಈ ಮಳಿಗೆಗಳನ್ನು ಟೆಂಡರ್ ಮೂಲಕ ವಿಲೇವಾರಿ ಮಾಡಲಾಗಿದೆ. ಮಳಿಗೆ ಪಡೆದಿರುವ ಕೆಲವರು ಈ ಸ್ಥಳದಲ್ಲಿ ತಮ್ಮ ವ್ಯಾಪಾರ ಮುಂದುವರೆಸಿದ್ದಾರೆ. ಆದರೆ, ಬಹಳಷ್ಟು ಮಂದಿ ಮಳಿಗೆ ಪಡೆದುಕೊಂಡಿದ್ದರೂ ಇಲ್ಲಿಗೆ ತಮ್ಮ ಅಂಗಡಿಗಳನ್ನು ಸ್ಥಳಾಂತರ ಮಾಡಿರಲಿಲ್ಲ. ತಾವಿದ್ದ ಸ್ಥಳದಲ್ಲೇ ವ್ಯಾಪಾರ ಮುಂದುವರೆಸಿದ್ದರು.
ಇದರಿಂದಾಗಿ ಅಂಗಡಿಗಳನ್ನು ಸ್ಥಳಾಂತರ ಮಾಡಿಕೊಂಡ ವ್ಯಾಪಾರಸ್ಥರಿಗೆ ತುಂಬಾ ನಷ್ಟವಾಗುತ್ತಿತ್ತು. ಈ ಕಾರಣಕ್ಕಾಗಿಯೇ ಮಾಂಸ ಮಾರುಕಟ್ಟೆ ಮಳಿಗೆಯಲ್ಲಿರುವವರು ಕಳೆದ 18 ತಿಂಗಳಿಂದ ನಗರಸಭೆಗೆ ಬಾಡಿಗೆಯನ್ನು ಸಂದಾಯ ಮಾಡಿರಲಿಲ್ಲ. ಬಾಡಿಗೆ ಕೇಳಲು ಹೋದರೆ ಮೊದಲು ನಗರದ ವಿವಿಧೆಡೆ ಇರುವ ಅಂಗಡಿಗಳನ್ನು ಸ್ಥಳಾಂತರ ಮಾಡಿ ಎಂದು ಸಬೂಬು ಹೇಳುತ್ತಿದ್ದರು. ಇದರಿಂದ ನಗರಸಭೆಗೆ ಬರಬೇಕಾಗಿದ್ದ ಬಾಡಿಗೆ ಹಣ ಖೋತವಾಗಿತ್ತು.
ಈ ಬಗ್ಗೆ ಗಮನ ಹರಿಸಿದ ನಗರಸಭಾಧ್ಯಕ್ಷ ಪುಷ್ಪರಾಜ್ ನಗರದ ರಾಮನಹಳ್ಳಿ, ಗವನಹಳ್ಳಿ, ಉಪ್ಪಳ್ಳಿ, ಹೌಸಿಂಗ್ ಬೋರ್ಡ್ ಹಾಗೂ ಹಿರೇಮಗಳೂರಿನಲ್ಲಿರುವ ಮಾಂಸದ ಅಂಗಡಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ನಗರದ ಹೃದಯ ಭಾಗದಲ್ಲಿರುವ ಎಲ್ಲಾ ಮಾಂಸದ ಅಂಗಡಿಗಳನ್ನು ಮಾರುಕಟ್ಟೆ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಜು. 1ರವರೆಗೆ ಅಂಗಡಿ ಮಾಲೀಕರಿಗೆ ಗಡುವು ನೀಡಿದ್ದರು.
ಗಡುವು ನೀಡಿದ್ದ ದಿನವಾದ ಜು. 1 ರಂದು ನಗರಸಭಾಧ್ಯಕ್ಷ ಪುಷ್ಪರಾಜ್, ನಗರಸಭಾ ಸದಸ್ಯ ದೇವರಾಜ್ ಶೆಟ್ಟಿ ಸೇರಿದಂತೆ ಇತರೆ ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ ವಿವಿಧೆಡೆಗಳಲ್ಲಿರುವ ಮಾಂಸ ಮಾರಾಟ ಅಂಗಡಿಗಳಿಗೆ ತೆರಳಿ ಅವುಗಳನ್ನು ಮುಚ್ಚಿಸಿದರು. ಕೆಲವು ಮಾಲೀಕರು ಸ್ವಇಚ್ಚೆಯಿಂದ ಅಂಗಡಿ ಮುಚ್ಚಿದರು.
ಆದರೆ, ಇಲ್ಲಿನ ಬೇಲೂರು ರಸ್ತೆಯಲ್ಲಿರುವ ಜಬ್ಬರ್‌ದಸ್ತ್ ಮಾಂಸ ಮಾರಾಟ ಅಂಗಡಿಯನ್ನು ಮುಚ್ಚಿಸುವ ವೇಳೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಇಲ್ಲಿ ವ್ಯಾಪಾರ ನಡೆಸುವ ಸಂಬಂಧ ನಗರಸಭೆಯಲ್ಲಿ ಲೈಸನ್ಸ್ ಕೋರಿ ಅರ್ಜಿ ಸಲ್ಲಿಸಿದ್ದರೂ ಲೈಸನ್ಸ್ ನೀಡಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗೆ ದೂರನ್ನು ನೀಡಲಾಗಿದೆ ಎಂದು ಅಂಗಡಿ ಮಾಲೀಕ ತನ್ವೀರ್ ಹೇಳಿದರು. ಆದರೆ, ಇದಕ್ಕೆ ಮಣಿಯದ ನಗರಸಭೆಯ ಸಿಬ್ಬಂದಿ ಅಂಗಡಿಯ ಬಾಗಿಲನ್ನು ಮುಚ್ಚಿಸಿದರು.
ಮಾಂಸ ಮಾರಾಟದ ಕೇಂದ್ರದಲ್ಲಿ ಟೆಂಡರ್‌ನಲ್ಲಿ ಮಳಿಗೆ ಸಿಗದೆ ಇರುವವರಿಗೆ ತಾತ್ಕಾಲಿಕವಾಗಿ ಅಂಗಡಿ ನಡೆಸಲು ಮಳಿಗೆಯ ಬಳಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ನಗರಸಭಾಧ್ಯಕ್ಷ ಪುಷ್ಪರಾಜ್ ಹೇಳಿದರು.
ನಗರದ ವಿವಿಧೆಡೆ ಇದ್ದ ಒಟ್ಟು 24 ಮಾಂಸ ಮಾರಾಟ ಅಂಗಡಿಗಳನ್ನು ತೆರವುಗೊಳಿಸಲಾಯಿತು.