ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಯುವತಿ ಸೇರಿ ಐವರಿಗೆ ಜೀವಾವಧಿ

Vishwanath S
Updated On : 2 Jul 2014, 11:01 am

ಚಿಕ್ಕಮಗಳೂರು: ಪ್ರೀತಿಸಿದವನನ್ನು ಕೊಲೆ ಮಾಡಿಸಿದ ಯುವತಿ ಸೇರಿ ಐವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ಹಾಗೂ ರು. 1.05 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಮೀನಾಕ್ಷಿ, ಆಕೆಯ ಮತ್ತೊಬ್ಬ ಪ್ರಿಯಕರ ಪ್ರತಾಪ್ ಹಾಗೂ ಆತನ ಸ್ನೇಹಿತರಾದ ವಿನಯ, ಪರಮೇಶ ಮತ್ತು ನರಸಿಂಹರಾಜು ಎಂಬುವವರಿಗೆ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಎಸ್. ಕಮಲ ತೀರ್ಪು ನೀಡಿದ್ದಾರೆ.
ಬೇಲೂರು ತಾ. ರಾಜನಶಿರಿಯೂರಿನ ದಿಲೀಪ್‌ನನ್ನು ಮೀನಾಕ್ಷಿ ಪ್ರೀತಿಸುತ್ತಿದ್ದರು. ಈ ಇಬ್ಬರ ಜಾತಕ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕಾಗಿ ಮನೆಯವರು ಮದುವೆಗೆ ನಿರಾಕರಿಸಿದ್ದರು. ನಂತರದಲ್ಲಿ ಮೀನಾಕ್ಷಿ, ಪ್ರತಾಪ್‌ನನ್ನು ಪ್ರೀತಿಸಲು ಆರಂಭಿಸಿದಳು. ಈ ಇಬ್ಬರ ಮದುವೆಗೆ ದಿನಾಂಕ ಸಹ ನಿಶ್ಚಯವಾಗಿತ್ತು.
 ಮದುವೆ ಬಳಿಕ ದಿಲೀಪ್ ನಿಂದ ದಾಂಪತ್ಯ ಜೀವನಕ್ಕೆ ತೊಂದರೆಯಾಗಬಹುದೆಂದು ಅನುಮಾನಗೊಂಡ ಮೀನಾಕ್ಷಿ, ದಿಲೀಪ್ ವಿನಾಕಾರಣ ದೂರವಾಣಿ ಕರೆ ಮಾಡಿ ಮಾನಸಿಕವಾಗಿ ಪೀಡಿಸುತ್ತಿದ್ದಾನೆ ಎಂದು ಪ್ರತಾಪ್‌ನಿಗೆ ಮನದಟ್ಟು ಮಾಡಿದಳು. ಇದರಿಂದಾಗಿ ಈ ಇಬ್ಬರು ಸೇರಿ ದಿಲೀಪ್‌ನನ್ನು ಕೊಲೆ ಮಾಡಲು ಸ್ಕೆಚ್ ರೂಪಿಸಿದ್ದರು.
ಪ್ರೇಮಿಗಳ ದಿನದಂದು ಮೀನಾಕ್ಷಿ, ದಿಲೀಪ್‌ನಿಗೆ ದೂರವಾಣಿ ಕರೆ ಮಾಡಿ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದುದರಿಂದ ಎಲ್ಲಾದರೂ ಹೋಗೋಣ ಎಂದು ಹೇಳಿ ಹಳೇಬೀಡಿನ ಬಸವೇಶ್ವರ ಗುಡಿಯ ಹತ್ತಿರ ಬರುವಂತೆ  ಹೇಳಿದ್ದಳು.
 ದಿಲೀಪ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರತಾಪ್ ತನ್ನ ಸ್ನೇಹಿತರಾದ ವಿನಯ, ಪರಮೇಶ ಹಾಗೂ ನರಸಿಂಹರಾಜು ಅವರೊಂದಿಗೆ ಸ್ಕಾರ್ಪಿಯೋ ವಾಹನದಲ್ಲಿ ಬಂದು ಜಾಕ್ ನಿಂದ ದಿಲೀಪ್‌ನ ತಲೆಗೆ ಹೊಡೆದು, ನಂತರದಲ್ಲಿ ಕೊಲೆ ಮರೆ ಮಾಚಲು ಕಳಸಾಪುರದ ಹತ್ತಿರ ಜೋಡಿ ಸೇತುವೆ ಬಳಿ ದಿಲೀಪನ ಶವವನ್ನು ಮಲಗಿಸಿ ತಲೆ ಮೇಲೆ ವಾಹನದ ಟೈರ್ ಹತ್ತಿಸಿ ನಂತರ ಬೈಕ್‌ನ್ನು ಸೇತುವೆಗೆ ತಳ್ಳಿ ಅಪಘಾತದಿಂದ ಮರಣ ಹೊಂದಿದ ಹಾಗೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
 ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಚ್.ಎಸ್. ಕಮಲ ಅವರು ಪ್ರಕರಣ ಸಾಬೀತಾಗಿದ್ದರಿಂದ ಆರೋಪಿಗಳಾದ ಮೀನಾಕ್ಷಿ, ಪ್ರತಾಪ, ವಿನಯ, ಪರಮೇಶ, ನರಸಿಂಹರಾಜು ಎಂಬುವರವರಿಗೆ ಜೀವಾವಧಿ ಶಿಕ್ಷೆ ಮತ್ತು ರು. 1,05,000 ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ ರು. 75,000 ಗಳನ್ನು ಮೃತ ದಿಲೀಪ್ ನ ತಾಯಿ ಯಶೋದಾರಿಗೆ ಪರಿಹಾರವಾಗಿ ನೀಡುವಂತೆ ತೀರ್ಪು ನೀಡಿದ್ದಾರೆ.
 ಸರಕಾರದ ಪರವಾಗಿ ಸರ್ಕಾರಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಅಶೋಕ್ ಎನ್. ನಾಯ್ಕ ಮೊಕದ್ದಮೆ ನಡೆಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement