ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೇಲ್ವೆ ಮೇಲ್ಸೇತುವೆ ಸ್ಥಳ ಪರಿಶೀಲನೆ

Vishwanath S
Updated On : 2 Jul 2014, 11:01 am

ಚಿಕ್ಕಮಗಳೂರು: ರೇಲ್ವೆ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಚಿಕ್ಕಮಗಳೂರು ತಾಲೂಕಿನ ಹೊಸಕೋಟೆ ಮತ್ತು ನಗರಸಭೆ ವ್ಯಾಪ್ತಿಯ ಹಿರೇಮಗಳೂರು ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮತ್ತು ಜಿಲ್ಲಾಧಿಕಾರಿ ಶೇಖರಪ್ಪ ಸ್ಥಳ ಪರಿಶೀಲನೆ ನಡೆಸಿದರು.
ಹೊಸಕೋಟೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿದ ಗಾಯತ್ರಿ ಶಾಂತೇಗೌಡ, ಗ್ರಾಮಸ್ಥರ ಹೋರಾಟದ ಫಲವಾಗಿ ಸರಕಾರ ಈಗ ಹಣ ಬಿಡುಗಡೆ ಮಾಡಿದೆ. ಗ್ರಾಮಸ್ಥರಿಗೆ ಅನುಕೂಲ ಆಗುವ ಕಡೆಯಲ್ಲಿ ಸೇತುವೆ ನಿರ್ಮಿಸಬೇಕಾಗಿದೆ. ಯಾವುದೇ ಗೊಂದಲಕ್ಕೆ ಒಳಗಾಗದೆ ಗ್ರಾಮಸ್ಥರು ಕೂತು ಚರ್ಚಿಸಿ ಸೂಕ್ತ ಸ್ಥಳವನ್ನು ಗುರುತಿಸಿ ತಿಳಿಸಬೇಕು ಎಂದು ಹೇಳಿದರು.
ಹೊಸಕೋಟೆ ಮತ್ತು ಹಿರೇಮಗಳೂರಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯವಾದ ರು. 15.48 ಕೋಟಿ ಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಡುಗಡೆ ಮಾಡಿದ್ದಾರೆ. ಈಗ ಹಣ ಉಪ ವಿಭಾಗಾಧಿಕಾರಿ ಖಾತೆಯಲ್ಲಿದೆ. ಗ್ರಾಮಸ್ಥರು ಸೂಕ್ತ ಸ್ಥಳವನ್ನು ಗುರುತಿಸಿ ತಿಳಿಸಿದಲ್ಲಿ ಕಾಮಗಾರಿಯನ್ನು ರೈಲ್ವೆ ಇಲಾಖೆ ಆರಂಭಿಸಲಿದೆ ಎಂದು ತಿಳಿಸಿದರು.
ಗ್ರಾಮಸ್ಥರಿಂದ ಸಲಹೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಶೇಖರಪ್ಪ ಮಾತನಾಡಿ, ರೈತರು ಕೃಷಿ ಚಟುವಟಿಕೆಗಳಿಗೆ ತೆರಳಲು ಮತ್ತು ದನಕರುಗಳು ಸಂಚರಿಸಲು ಸೇತುವೆಯ ಅಗತ್ಯ ಇದೆ ಎಂದು ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.
ರೈತರ ಜಮೀನಿಗೆ ತೊಂದರೆಯಾಗದ ರೀತಿಯಲ್ಲಿ ಹಾಗೂ ಅಂದಾಜಿಗೆ ಅನುಗುಣವಾಗಿ ಯಾವ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡಬಹುದು ಎಂಬ ಬಗ್ಗೆ ಗ್ರಾಮಸ್ಥರ ಸಹಕಾರ, ಸಲಹೆಗಳೊಂದಿಗೆ ನಕ್ಷೆಯನ್ನು ತಯಾರಿಸಿದ ನಂತರ ಎಲ್ಲ ಮಾಹಿತಿಗಳನ್ನು ಒಂದು ವಾರದೊಳಗೆ ನೀಡಬೇಕು ಎಂದು ರೈಲ್ವೆ ಎಂಜಿನಿಯರ್ಗ್‌ಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ರೈಲ್ವೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿ, ಗ್ರಾಮಸ್ಥರು ಯಾವ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂಬುದನ್ನು ತುರ್ತಾಗಿ ತಿಳಿಸಿದಲ್ಲಿ ಕಾಮಗಾರಿಯನ್ನು ಈ ವಾರದಲ್ಲೆ ಆರಂಭಿಸಲಾಗುತ್ತದೆ. ಎಂದು ಹೇಳಿದರು.
ನಂತರ ಹಿರೇಮಗಳೂರಿನಲ್ಲಿ ರು. 9 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಿರುವ ಸ್ಥಳಕ್ಕೆ ಗಾಯತ್ರಿ ಶಾಂತೇಗೌಡ ಮತ್ತು ಉಪ ವಿಭಾಗಾಧಿಕಾರಿ ಚನ್ನಬಸಪ್ಪ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಜನರಿಂದ ಸಲಹೆಗಳನ್ನು ಆಲಿಸಿದರು.
ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಐಡಿಎಸ್‌ಜಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಆರ್. ವಿಜಯನ್, ಮುಖಂಡ ಎಚ್.ಜೆ. ಶಿವಕುಮಾರ್, ಎಚ್.ಆರ್. ಚಂದ್ರಪ್ಪ, ರಂಗಯ್ಯ, ರಂಗಾಳಯ್ಯ, ಮುಳ್ಳಯ್ಯ, ಹೊಸಕೋಟೆಯಲ್ಲಿ ಗ್ರಾಪಂ ಅಧ್ಯಕ್ಷ ತಿರುಮಲರಾಜು, ಪುಟ್ಟೇಗೌಡ, ಮುಳ್ಳೇಗೌಡ, ರೈಲ್ವೆ ಎಂಜಿನಿಯರ್ ಚಂದ್ರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement