ಲೋಕಸಭಾ ಚುನಾವಣೆ: 11 ಅಭ್ಯರ್ಥಿಗಳ ಖರ್ಚು ಬರೀ 1.70 ಕೋಟಿ!
ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 11ರಲ್ಲಿ 10 ಅಭ್ಯರ್ಥಿಗಳು ಚುನಾವಣೆಗೆ ಖರ್ಚು ಮಾಡಿದ್ದು ಎಷ್ಟು ಗೊತ್ತೆ.?
ಚುನಾವಣಾಧಿಕಾರಿಗಳಿಗೆ ನೀಡಿರುವ ಲೆಕ್ಕದ ಪ್ರಕಾರ ಬರೀ ರು. 1,70,85,023 ಮಾತ್ರ.
ಲೆಕ್ಕ ಕೊಡದ ಒಬ್ಬ ಪಕ್ಷೇತರ ಅಭ್ಯರ್ಥಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಉಡುಪಿ- ಚಿಕ್ಕಮಗಳೂರು ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಇತರೆ ರಾಜಕೀಯ ಪಕ್ಷದವರು ರೋಡ್ ಶೋ, ಬಹಿರಂಗ ಸಭೆ, ಮನೆ ಮನೆಗಳಿಗೆ ತೆರಳಿ ಮತ ಕೇಳಲು ತೆರಳಿದ ಸಂದರ್ಭದಲ್ಲಿ ಅವರು ಪ್ರಚಾರದ ವೇಳೆಯಲ್ಲಿ ಖರ್ಚು ಮಾಡಿರುವ ಹಣದ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಡಬೇಕು. ಅದರಂತೆ 10 ಮಂದಿ ತಮ್ಮ ಲೆಕ್ಕವನ್ನು ನೀಡಿದ್ದಾರೆ.
ಜೂನ್ 16ರ ವರೆಗೆ ಕಾಲಾವಕಾಶ: ಏಪ್ರಿಲ್ 19 ರಂದು ಚುನಾವಣೆ ನಡೆದು, ಮೇ 16 ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. ಕಣದಲ್ಲಿರುವವರು ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೊಡಲು ಜೂನ್ 16ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯೊಳಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ 11 ಅಭ್ಯರ್ಥಿಗಳ ಪೈಕಿ 10 ಮಂದಿ ಮಾತ್ರ ಲೆಕ್ಕಪತ್ರವನ್ನು ನೀಡಿದ್ದಾರೆ.
ಚುನಾವಣಾ ಆಯೋಗಕ್ಕೆ ನೀಡಿರುವ ಲೆಕ್ಕಪತ್ರ ನೋಡಿದಾಗ 10 ಅಭ್ಯರ್ಥಿಗಳಲ್ಲಿ ಯಾರೂ ಆಯೋಗ ನಿಗದಿಪಡಿಸಿರುವ ರು. 70 ಲಕ್ಷ ದಾಟಿಲ್ಲ. ಅಂದರೆ, ಅಷ್ಟರೊಳಗೆ ಖರ್ಚು ಬರುವಂತೆ ಲೆಕ್ಕವನ್ನು ನೀಡಿದ್ದಾರೆ. ಈ 10 ಮಂದಿಯಲ್ಲಿ ಚುನಾವಣೆಯಲ್ಲಿ ಅತೀ ಹೆಚ್ಚು ಖರ್ಚು ಮಾಡಿರುವವರ ಪೈಕಿ ಬಿಜೆಪಿಯ ಶೋಭಾ ಕರಂದ್ಲಾಜೆ ಪ್ರಥಮ ಸ್ಥಾನದಲ್ಲಿದ್ದಾರೆ.
ಅಂದರೆ ಅವರು, ಚುನಾವಣೆಗಾಗಿ ಖರ್ಚು ಮಾಡಿದ್ದು, ರು. 57,18,555 ಮಾತ್ರ. ಎರಡನೇ ಸ್ಥಾನದಲ್ಲಿ ಜೆಡಿಎಸ್ನ ವಿ. ಧನಂಜಯಕುಮಾರ್ ಇದ್ದಾರೆ. ಅವರು ಖರ್ಚು ಮಾಡಿದ್ದು ರು. 55,04,544 ರುಪಾಯಿ, ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗಡೆ ಖರ್ಚು ಮಾಡಿದ್ದು ರು. 43,08,711 ರುಪಾಯಿ.
10 ಅಭ್ಯರ್ಥಿಗಳಲ್ಲಿ ಅತಿ ಕಡಿಮೆ ಖರ್ಚು ಮಾಡಿರುವುದು ಪಕ್ಷೇತರ ಅಭ್ಯರ್ಥಿ ಜಿ. ಮಂಜುನಾಥ್, ಅಂದರೆ ರು. 12,750 ಮಾತ್ರ. ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಎಂ.ಡಿ.ಮೇನುದ್ದೀನ್ಖಾನ್ ಆಲಿಯಾಸ್ ಆಸ್ಫೀಯಾ ಖರ್ಚಿನ ಬಗ್ಗೆ ಚುನಾವಣಾಧಿಕಾರಿಗೆ ನಿಗದಿತ ಸಮಯದೊಳಗೆ ಮಾಹಿತಿ ನೀಡಿಲ್ಲ. ಈ ಕಾರಣಕ್ಕಾಗಿ ಅವರಿಗೆ 3 ಬಾರಿ ನೋಟಿಸ್ ಜಾರಿ ಮಾಡಿದರೂ ಅವರು ಲೆಕ್ಕಪತ್ರವನ್ನು ನೀಡಿಲ್ಲ.
ಇದು ಪಕ್ಕ ಲೆಕ್ಕವೇ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 10 ಅಭ್ಯರ್ಥಿಗಳು ಕೊಟ್ಟಿರುವ ಲೆಕ್ಕದಲ್ಲಿ ಒಟ್ಟು ರು. 1,70,85,023 ಖರ್ಚಾಗಿದೆ.
ಇದೊಂದು ಪಕ್ಕ ಲೆಕ್ಕವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಆದರೆ, ಚುನಾವಣಾ ಆಯೋಗಕ್ಕೆ ಈ ಲೆಕ್ಕ ನೀಡಿರುವುದರಿಂದ ಒಪ್ಪಲೇಬೇಕಾಗಿದೆ.
ಆದರೂ ಚುನಾವಣಾ ಸಂದರ್ಭದಲ್ಲಿ ಪ್ರಮುಖ ರಾಜಕೀಯ ಪಕ್ಷದ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿರುವ ಸಂದರ್ಭದಲ್ಲಿ ಲಕ್ಷಾಂತರ ರುಪಾಯಿ ಖರ್ಚಾಗಿದೆ. ಚುನಾವಣಾ ಬಹಿರಂಗ ಸಭೆ ಹಾಗೂ ಪ್ರಚಾರ ವೇಳೆಯಲ್ಲಿ ಅಲ್ಲಿ ನೆರೆದಿರುವ ಜನರ ಮೇಲೆ ಹಾಗೂ ಖರ್ಚಿನ ಮೇಲೆ ಕಣ್ಣಿಡಲು ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಆದರೂ ಸಹ ಅಭ್ಯರ್ಥಿಗಳು ತಮ್ಮ ಲೆಕ್ಕವನ್ನು ಒಪ್ಪಿಕೊಳ್ಳಲೇ ಬೇಕಾದ ರೀತಿಯಲ್ಲಿ ನೀಡಿದ್ದಾರೆ.
ಆರ್. ತಾರಾನಾಥ್