ಸಾಲ ಮನ್ನಾಕ್ಕೆ ಆಗ್ರಹ
ಚಿಕ್ಕಮಗಳೂರು: ಕಾಂಡಕೊರಕ ರೋಗದಿಂದ ಕಾಫಿ ಬೆಳೆಗಾರರಿಗೆ ಅಪಾರ ನಷ್ಟ ಸಂಭವಿಸಿದ್ದು, ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಕಾಫಿ ಮಂಡಳಿ ಅಧ್ಯಕ್ಷರು ಹಾನಿಗೊಳಗಾದ ಕಾಫಿ ತೋಟಗಳಿಗೆ ಭೇಟಿ ನೀಡಿ ಸತ್ಯಾಸತ್ಯತೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಕಳೆದ ಹತ್ತಾರು ವರ್ಷದಿಂದ ಕಾಫಿ ಬೆಳೆಗಾರರು ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕಿರುವ ಸಂದರ್ಭದಲ್ಲಿ ಕಾಫಿ ತೋಟದಲ್ಲಿ ಈ ಬಾರಿ ಎಂದೆಂದೂ ಕಾಣದಂತಹ ಕಾಂಡಕೊರಕ (ಬೋರರ್) ರೋಗದಿಂದ ಒಂದು ಎಕರೆಗೆ ಕನಿಷ್ಠ 150 ರಿಂದ 200 ಗಿಡಗಳು ಬೋರರ್ ಹುಳಗಳಿಂದ ಬೆಳೆದು ನಿಂತ ಫಸಲಿಗೆ ಬಂದ ಗಿಡಗಳನ್ನು ಕಿತ್ತು ಹಾಕುವ ಪರಿಸ್ಥಿತಿ ಬಂದಿದೆ. ಕಾಫಿ ಮಂಡಳಿಯವರು ನೆರವಿಗೆ ಸ್ಪಂದಿಸದೇ ಇರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ 3-4 ಮಂದಿ ಕಾಫಿ ಮಂಡಳಿ ಸದಸ್ಯರಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಸಣ್ಣ ಬೆಳೆಗಾರರ ಪಾಡಂತೂ ಹೇಳತೀರದಾಗಿದೆ. ಕಾಫಿ ಮಂಡಳಿ ಅಧ್ಯಕ್ಷರನ್ನು ಜಿಲ್ಲೆಗೆ ಕರೆಸಿ ಹಾನಿಯಾಗಿರುವ ತೋಟಗಳಿಗೆ ಭೇಟಿ ನೀಡಿ, ಸರ್ಕಾರಕ್ಕೆ ವರದಿ ಸಲ್ಲಿಸಿ ಪ್ರತಿ ಎಕರೆಗೆ ಮಂಡಳಿಯಿಂದ ಕನಿಷ್ಠ 1 ಲಕ್ಷ ಪರಿಹಾರ ಘೋಷಿಸಬೇಕು. ಸ್ಪಂದಿಸದಿದ್ದರೆ ಕಾಫಿ ಮಂಡಳಿ ಎದುರು ಪ್ರತಿಭಟಿಸುವ ಎಂದು ಎಚ್ಚರಿಕೆ ನೀಡಿದ್ದಾರೆ.