ಮಾಂಸ ಮಾರಾಟಕ್ಕೆ ಕಾಲಾವಕಾಶ
ಚಿಕ್ಕಮಗಳೂರು: ನಗರದ ವಿವಿಧೆಡೆಗಳಲ್ಲಿದ್ದ ಮಾಂಸ ಮಾರಾಟ ಅಂಗಡಿಗಳನ್ನು ನಗರಸಭೆಯಿಂದ ಮುಚ್ಚಲಾಗಿದ್ದು, ಹಲವರ ಕೋರಿಕೆಯ ಮೇರೆಗೆ ರಂಜಾನ್ ಹಬ್ಬ ಮುಗಿಯುವವರೆಗೆ ಈ ಹಿಂದಿದ್ದ ಆಯಾ ಸ್ಥಳಗಳಲ್ಲಿ ಮಾಂಸ ಮಾರಾಟ ಅಂಗಡಿಗಳನ್ನು ನಡೆಸಲು ಕಾಲಾವಕಾಶ ನೀಡಲಾಗಿದೆ ಎಂದು ನಗರಸಭಾಧ್ಯಕ್ಷ ಪುಷ್ಪರಾಜ್ ಅವರು ತಿಳಿಸಿದ್ದಾರೆ.
ಮಾಂಸದ ಅಂಗಡಿಗಳ ಮಾಲೀಕರು ಮತ್ತು ಹಜ್ರತ್ ಟಿಪ್ಪು ಸುಲ್ತಾನ್ ಮಹಾ ವೇದಿಕೆ ಹಾಗೂ ಮುಸ್ಲಿಂ ಮೈನಾರಿಟಿ ಯುತ್ ಕಮಿಟಿಯವರು ನಗರಸಭೆಗೆ ಆಗಮಿಸಿ ರಂಜಾನ್ ಹಬ್ಬದ ನಿಮಿತ್ತ ಸಮಯ ಕೋರಿ ಶಾಸಕ ಸಿ.ಟಿ. ರವಿ ಅವರನ್ನು ಭೇಟಿ ಮಾಡಿ ರಂಜಾನ್ ಹಬ್ಬ ಮುಗಿಯುವವರೆಗೂ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.
ಮಾತ್ರವಲ್ಲದೇ ಪೌರಾಡಳಿತ ಸಚಿವರಾದ ಖಮರುಲ್ ಇಸ್ಲಾಂ ಅವರು ಸರ್ಕಾರದ ವತಿಯಿಂದ ನಗರಸಭೆಗೆ ಪತ್ರ ಬರೆದು ಪವಿತ್ರ ರಂಜಾನ್ ಮಾಹೆಯಾಗಿರುವುದರಿಂದ ರಂಜಾನ್ ಹಬ್ಬದವರೆಗೆ ಸಮಯಾವಕಾಶ ಕೊಡಬೇಕಾಗಿ ಆದೇಶ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿ, ತಾತ್ಕಾಲಿಕವಾಗಿ ರಂಜಾನ್ ಹಬ್ಬ ಮುಗಿಯುವವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಮಾಂಸದ ಅಂಗಡಿಗಳನ್ನು ಸಂತೆ ಮೈದಾನದ ಸಮುಚ್ಚಯಕ್ಕೆ ವರ್ಗಾವಣೆ ಮಾಡಲು ಕ್ರಮ ಕೈಗೊಂಡಿತ್ತು. ಮಾರ್ಕೆಟ್ ರಸ್ತೆಯ ವಿಸ್ತರಣೆಯ ಕಾರಣದಿಂದಾಗಿ ಎಲ್ಲಾ ಮಾಂಸದ ಅಂಗಡಿ ಮಾರಾಟಗಾರರು ಒಂದು ವರ್ಷ ಕಾಲ ಸಮಯವಾಕಾಶ ಕೋರಿದ್ದರು. ಅದರಂತೆ ಕಾಲಾವಕಾಶ ನೀಡಿ, ಜು. 1 ರಂದು ನಗರದ ವಿವಿಧ ಭಾಗಗಳಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿದ್ದ ಮಾಂಸದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿತ್ತು.
ಸಮುಚ್ಚಯದಲ್ಲಿ ಮಾಂಸದ ಅಂಗಡಿ ನಡೆಸಲು ವಿರೋಧ ಮಾಡುತ್ತಿರುವ ಅನೇಕರು ಬೇನಾಮಿ ಹೆಸರಿನಲ್ಲಿ ಮಳಿಗೆ ಪಡೆದಿದ್ದು, ಇನ್ನು ಕೆಲವರು ಸ್ವತಃ ಅವರುಗಳೇ ಹಿಂದೆ ನಡೆದ ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ಮಳಿಗೆಗಳನ್ನು ಪಡೆದುಕೊಂಡಿರುತ್ತಾರೆ. ಕಳೆದ 18 ತಿಂಗಳುಗಳಿಂದ ಈ ನಗರಸಭಾ ಸಮುಚ್ಚಯದ ಮಳಿಗೆಯನ್ನು ಪಡೆದ ಮಾಲೀಕರು ಬಾಡಿಗೆಯನ್ನು ನಗರಸಭೆಗೆ ಪಾವತಿಸಿರುವುದಿಲ್ಲ. ಇದರಿಂದ ನಗರಸಭೆಯ ಆದಾಯವೂ ಕುಂಠಿತಗೊಂಡಂತೆ ಆಗಿದೆ. ಮಾಂಸದ ಅಂಗಡಿಗಳ ಸಮುಚ್ಚಯಗಳಿಗೆ ಸ್ಥಳಾಂತರಿಸುವ ಕಾರ್ಯಕ್ಕೆ ನಗರದ ವಿವಿಧ ಸಂಘಟನೆಗಳು, ಮುಖಂಡರು ಹಾಗೂ ಸಾರ್ವಜನಿಕರ ಶ್ಲಾಘಿಸಿದ್ದರು.
ಮಾಂಸದ ಅಂಗಡಿಗಳನ್ನು ಸಮುಚ್ಚಯಕ್ಕೆ ಸ್ಥಳಾಂತರಿಸುವ ಕಾರ್ಯವೂ ಯಾವುದೇ ಕೋಮಿನ ವಿರುದ್ಧವಾಗಿ ತೆಗೆದುಕೊಂಡ ಕ್ರಮವಾಗಿರುವುದಿಲ್ಲ. ಈ ಕ್ರಮವು ಜನಸಾಮಾನ್ಯರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಿದ್ದು, ಮುಂದಿನ ರಂಜಾನ್ ಹಬ್ಬದ ನಂತರ ಸ್ಥಳಾಂತರಗೊಳಿಸಲು ಮತ್ತು ಪರವಾನಗಿ ಇಲ್ಲದ ಅಂಗಡಿ ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ನಗರದ ಸಂತೆ ಮೈದಾನದ ಮಾಂಸದ ಅಂಗಡಿಯ ಸಮುಚ್ಚಯ ಮಾತ್ರವಲ್ಲದೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ಪ್ರಮುಖ ನಾಲ್ಕು ಭಾಗಗಳಲ್ಲಿ ಕುರಿ ಕೋಳಿ ಮಾಂಸದ ಮಳಿಗೆಗಳನ್ನು ತೆರೆಯಲು ನಗರಸಭೆಯ ವತಿಯಿಂದ ಜಾಗ ಗುರುತಿಸುವ ಕಾರ್ಯ ಕೈಗೊಂಡಿದೆ. ನಗರಸಭೆಯೇ ಆ ಜಾಗಗಳಲ್ಲಿ ಮಳಿಗೆಗಳನ್ನು ತೆರೆದು ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು
ಟಿ ಪುಷ್ಪರಾಜ್, ನಗರಸಭಾಧ್ಯಕ್ಷ