ಅಚ್ಛಾ ದಿನ ಅಂದ್ರೆ ಇದೇನಾ: ಗಾಯಿತ್ರಿ ಆಕ್ರೋಶ
ಚಿಕ್ಕಮಗಳೂರು: ಚುನಾವಣೆಯಲ್ಲಿ ಅಚ್ಛಾ ದಿನ್ ಆನೆವಾಲೆ ಹೈ ಎಂದು ಅಬ್ಬರಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರ ಎರಡು ತಿಂಗಳು ತುಂಬುವ ಮೊದಲೆ ರೈಲು ಪ್ರಯಾಣ ದರ, ಇಂಧನ, ಅಡುಗೆ ಅನಿಲ, ಸಕ್ಕರೆ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡುವ ಮೂಲಕ ಜನರಿಗೆ ಬರೆ ಎಳೆದಿದೆ. ಅಚ್ಚಾ ದಿನ್ ಎಂದರೆ ಇದೇನಾ ಎಂದು ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಪ್ರಶ್ನಿಸಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದ ಸಂದರ್ಭದಲ್ಲಿ ಹೆಚ್ಚೆಂದರೆ ಶೇ. 6ರಷ್ಟು ಪ್ರಯಾಣ ದರ ಮತ್ತು ಸರಕು ಸಾಗಣೆ ದರ ಏರಿಕೆ ಮಾಡಿತ್ತು. ಆದರೆ, ಎನ್ಡಿಎ ಸರ್ಕಾರ ಕೇವಲ ಒಂದು ತಿಂಗಳಲ್ಲೆ ಶೇ. 14ಕ್ಕೂ ಹೆಚ್ಚು ರೈಲು ಪ್ರಯಾಣ ದರ ಹೆಚ್ಚಿಸುವ ಮೂಲಕ ದೇಶದಲ್ಲಿ ದಾಖಲೆ ನಿರ್ಮಿಸಿದೆ. ದೊಡ್ಡ ಪ್ರಮಾಣದಲ್ಲಿ ದರ ಹೆಚ್ಚು ಮಾಡಿರುವ ಪರಿಣಾಮವಾಗಿ ಜನಸಾಮಾನ್ಯರು ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಕಂಡಿವೆ. ಸಕ್ಕರೆ ಬೆಲೆಯಲ್ಲಿ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಿಳಿಸಿದ್ದಾರೆ.
ಜನಪರ ಆಡಳಿತ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುವ ಮೂಲಕ ಎಲ್ಲ ವರ್ಗದ ಜನರ ವಿಶ್ವಾಸ, ನಂಬಿಕೆಗೆ ಪಾತ್ರವಾಗಿದೆ. ರೈತ ಪರವಾಗಿ, ಜನಪರವಾಗಿ ಸಾಕಷ್ಟು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.