ರೋಗ ನಿರೋಧಕ ಶಕ್ತಿ ವೃದ್ಧಿಗೆ ಉಪವಾಸ ವ್ರತ ಸಹಕಾರಿ: ತ್ವಾಹ ಸದಿ
ಚಿಕ್ಕಮಗಳೂರು: ಹಲವು ರೋಗ ನಿರ್ಮೂಲನೆ ಮತ್ತು ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಉಂಟು ಮಾಡಲು ಉಪವಾಸ ವ್ರತ ಸಹಕಾರಿ ಎಂದು ಉಪ್ಪಳ್ಳಿ ಮಸೀದಿಯ ಮುಸ್ಲಿಂ ಧರ್ಮಗುರು ತ್ವಾಹ ಸದಿ ಹೇಳಿದ್ದಾರೆ.
ನಗರದ ಉಪ್ಪಳ್ಳಿ ಮಸೀದಿ ಆವರಣದಲ್ಲಿ ಶನಿವಾರ ನಡೆದ ಎಸ್ಎಸ್ಎಫ್ ಬೆಳ್ಳಿ ಹಬ್ಬದ ಆಚರಣೆ ಮತ್ತು ರಂಜಾನ್ ಮಾಸದ ಅಂಗವಾಗಿ ಬಡವರಿಗೆ ನೀಡಿದ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಶಿಕ್ಷಣ ಬೆಳವಣಿಗೆ, ಬಡತನ ನಿರ್ಮೂಲನೆ ಮತ್ತು ದೇಶಪ್ರೇಮಕ್ಕೆ ಸಂಬಂಧಪಟ್ಟ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಎಸ್ಎಸ್ಎಫ್ ಮುಂದಾಗಿದೆ. ಮುಸಲ್ಮಾನರ ಪವಿತ್ರ ರಂಜಾನ್ ಮಾಸ ಆಧ್ಯಾತ್ಮಿಕ ತಿಂಗಳು, ಈ ಹಬ್ಬದ ಅಂಗವಾಗಿ ಉಪವಾಸ ಮಾಡುವುದು ಆರಾಧನೆ ಭಾಗವಲ್ಲ. ವೈಜ್ಞಾನಿಕವಾಗಿ ವ್ಯಕ್ತಿಯ ಆತ್ಮ ನಿಯಂತ್ರಣ ಮತ್ತು ಮಾನವೀಯತೆ ನೆಲೆಗೆ ಸಹಕಾರಿ ಎಂದರು.
ಹಸಿವು ಅನುಭವಿಸಿದವರಿಗೆ ಮಾತ್ರ ಬಡವರ ಕಷ್ಟದ ಅರಿವಾಗುತ್ತದೆ. ಹಸಿವಿಗಿರುವ ಮಹತ್ವ ಅರಿತು ಆರ್ಥಿಕವಾಗಿ ಹಿಂದುಳಿದ ಅಶಕ್ತ ಕುಟುಂಬಗಳಿಗೆ ಆಹಾರ ಸಾಮಗ್ರಿ ನೀಡುವ ಮೂಲಕ ಮಾನವೀಯತೆ ಮೆರೆಯಬೇಕೆಂದರು.
ಎಸ್ವೈಎಸ್ ಜಿಲ್ಲಾಧ್ಯಕ್ಷ ಎಪಿಎಸ್ ಆಟಕ್ಕೋಯ ತಂಙಳ್ ಮಾತನಾಡಿ, ರಂಜಾನ್ ಮಾಸದಲ್ಲಿ ಉಪವಾಸದ ಆಚರಣೆ ಮೂಲಕ ಆರ್ಥಿಕವಾಗಿ ಸ್ಥಿತಿವಂತರಾಗಿರುವವರು ಮತ್ತು ಸಂಘ ಸಂಸ್ಥೆಗಳು ಹಸಿದವರಿಗೆ ಆಹಾರ ಸಾಮಗ್ರಿ ನೀಡುವುದು ಧರ್ಮ ಎಂದರು.
ಎಸ್ಎಸ್ಎಫ್ ಶಾಖಾಧ್ಯಕ್ಷ ಅಬುಸಾಲಿ ಸಖಾಫಿ, ಉಪಾಧ್ಯಕ್ಷ ಮುನೀರ್ ಅಹಮದ್, ಎಸ್ವೈಎಸ್ನ ಹುಸೇನ್ ಹಾಜಿ, ಮುಖಂಡರಾದ ರಫೀಕ್ ಸಖಾಫಿ, ಆಶ್ರಫ್, ದಾವೂದ್, ಬದ್ರುದ್ದೀನ್ ಇದ್ದರು.