ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಋಷ್ಯಶೃಂಗೇಶ್ವರಗೆ ಸಚಿವ ಡಿಕೆಶಿ ಪೂಜೆ

Mainashree
Updated On : 7 Jul 2014, 10:00 am

ಚಿಕ್ಕಮಗಳೂರು:  ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯದಿಂದಾಗಿ ಬರದ ಛಾಯೆ ಮೂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಮಳೆಗಾಗಿ ಪ್ರಾರ್ಥಿಸಿ ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿರುವ ಋಷ್ಯಶೃಂಗ ದೇವಾಲಯದಲ್ಲಿ ಋಷ್ಯಶೃಂಗೇಶ್ವರನಿಗೆ ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಆವರಣದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಹೋಮ, ಹವನ ಹಾಗೂ ವಿಶೇಷ ಪೂಜೆ ನಡೆಯುತ್ತಿತ್ತು. ಸಚಿವ ಡಿ.ಕೆ. ಶಿವಕುಮಾರ್ ಅವರು ಮಳೆಗಾಗಿ ಪ್ರಾರ್ಥಿಸಿ ಪೂರ್ಣಾಹುತಿಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಮಳೆ ಇಲ್ಲದೆ ಬರ ಬರುವ ಸಾಧ್ಯತೆ ಇದೆ. ಆದುದರಿಂದ ಮಳೆಗಾಗಿ ಪೂಜೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.
ನಂಬಿಕೆ: ನಮ್ಮದು ಭಾರತ ದೇಶ. ಇಲ್ಲಿ ಎಲ್ಲಾ ಜಾತಿ, ಧರ್ಮ, ಸಂಸ್ಕೃತಿಯೂ ಇದೆ. ಅವರವರ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಯುತ್ತಿವೆ. ಪೂಜೆ ಮಾಡುವ ಸಂಪ್ರದಾಯ ಕೆಲವರು ನಂಬುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ನಾವು ಯಾವುದೇ ಕೆಲಸ ಮಾಡುವಾಗ ದೇವರಿಗೆ ಪೂಜೆ ಸಲ್ಲಿಸಿ ಬೇಡುವ ಸಂಪ್ರದಾಯ ಇದೆ.
ಅದೇ ರೀತಿ ಇಲ್ಲೂ ಕೂಡ ಮಳೆಗಾಗಿ ಪ್ರಾರ್ಥನೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಈ ಪೂಜೆ ಮತ್ತು ಪ್ರಾರ್ಥನೆ ಒಂದೇ ದಿನಕ್ಕೆ ಮುಗಿಯುವುದಿಲ್ಲ. ಮುಂದಿನ ದಿನಗಳಲ್ಲಿ ನಕ್ಷತ್ರ ಮತ್ತು ವಾರಗಳನ್ನು ನೋಡಿ 40 ದಿನಗಳ ಕಾಲ ಇಲ್ಲಿ ಪೂಜೆ ಸಲ್ಲಿಸುವಂತೆ ಅರ್ಚಕರಿಗೆ ಹೇಳಿದ್ದೇನೆ ಎಂದರು.
ಮಳೆ ಬರದೆ ಹೋದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಕ್ಷಾಮ ಎದುರಾಗಲಿದೆ. ಕೊರತೆಯ ವಿದ್ಯುತ್ ಸರಿದೂಗಿಸಲು ವಿದ್ಯುತ್ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದೆ. ಕೇಂದ್ರದಿಂದ ವಿದ್ಯುತ್ ಪೂರೈಕೆಯಾದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ ಎಂದರು.
ರಾಜ್ಯದ ಜತೆಗೆ ಬೇಕಾಬಿಟ್ಟಿಯಾಗಿ ವಿದ್ಯುತ್ ಬಳಕೆ ಮಾಡಬಾರದು. ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಇದೊಂದು ಪುಣ್ಯದ ಕೆಲಸವಾಗಲಿದೆ. ಸರ್ಕಾರಿ ಇಲಾಖೆಗಳಲ್ಲಿ ಹಗಲು ಹೊತ್ತಿನಲ್ಲಿ ವಿದ್ಯುತ್ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಗತ್ಯವಿದ್ದರೆ ಮಾತ್ರ, ಎಷ್ಟು ಬೇಕೋ ಅಷ್ಟೆ ವಿದ್ಯುತ್ ಬಳಕೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಕಿಗ್ಗಾಕ್ಕೆ ಭೇಟಿ ನೀಡುವ ಮೊದಲು ಸಚಿವ ಡಿ.ಕೆ. ಶಿವಕುಮಾರ್ ಅವರು ಶೃಂಗೇರಿಯ ಶಾರದಾಂಬೆ ಪೀಠಕ್ಕೆ ತೆರಳಿ, ಶ್ರೀಮಠದ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.
ಇದೇ ಸಂದರ್ಭ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement