ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಪಘಾತ ತಡೆಗೆ ಹಂಪ್ ನಿರ್ಮಿಸಲು ಆಗ್ರಹ

Mainashree
Updated On : 9 Jul 2014, 10:03 am

ಚಿಕ್ಕಮಗಳೂರು: ನಗರದ ಕೆ.ಎಂ. ರಸ್ತೆಯ ಬೋಳರಾಮೇಶ್ವರ ದೇವಾಲಯದ ವೃತ್ತದಿಂದ ಎಬಿಸಿ ಕಾಫಿ ಕ್ಯೂರಿಂಗ್‌ವರೆಗೂ ಭಾರಿ ವಾಹನಗಳ ಚಾಲಕರ ಅಜಾಗರೂಕತೆಯಿಂದ ಅಪಘಾತ ಹೆಚ್ಚಾಗುತ್ತಿದೆ. ಕೂಡಲೇ ಹಂಪ್ ನಿರ್ಮಿಸುವ ಮೂಲಕ ಸ್ಪೀಡ್ ಬ್ರೇಕ್ ಅಳವಡಿಸಿ ಅನಾಹುತಗಳನ್ನು ತಪ್ಪಿಸುವಂತೆ ಕರ್ನಾಟಕ ರಣಧೀರ ಪಡೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ನಗರದ ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಸಹಾಯಕರಿಗೆ ಮನವಿ ಸಲ್ಲಿಸಿದರು.
ಪಡೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆನ್ನಿಕ್ಲಾಸ್ ಡೇವಿಡ್, ಬೋಳರಾಮೇಶ್ವರ ದೇವಾಲಯದ ವೃತ್ತದಿಂದ ಎಬಿಸಿ ಕಾಫಿ ಕ್ಯೂರಿಂಗ್ ಮುಂಭಾಗದ ಸೇತುವೆವರೆಗೂ ಲಾರಿ, ಟಿಪ್ಪರ್, ಟ್ರ್ಯಾಕ್ಟರ್, ಆಟೋ, ಮರಳು ಗಾಡಿಗಳು ಸೇರಿದಂತೆ ಬೈಕ್ ಸವಾರರು ಅತಿ ವೇಗವಾಗಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಬರುವುದು ಸಾಮಾನ್ಯವಾಗಿದೆ.
ಇದರಿಂದ ಇತ್ತೀಚೆಗೆ ಹಲವು ಅಪಘಾತಗಳು ಸಂಭವಿಸಿ ಅಮಾಯಕರು ಪ್ರಾಣತೆತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ವೊಂದು ತೋಟಗಾರಿಕೆ ಇಲಾಖೆ ಕಚೇರಿಗೆ ಡಿಕ್ಕಿ ಹೊಡೆದು ಕಾಂಪೌಂಡ್ ಪೂರ್ಣ ಜಖಂಗೊಂಡಿದೆ. ರಸ್ತೆ ಅಗಲೀಕರಣ ಇಲ್ಲದಿರುವುದು ಇದಕ್ಕೆ ಕಾರಣವಾಗಿದ್ದು, ತೋಟಕಾರಿಕೆ ಇಲಾಖೆಯ ಕಾಂಪೌಂಡ್ ತೆಗೆದು ಸುಲಲಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ಬೋಳರಾಮೇಶ್ವರ ದೇವಾಲಯದ ವೃತ್ತದಲ್ಲಿ ಆಟೋಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುವುದನ್ನು ತಡೆಯಬೇಕು, ಕೆಎಸ್‌ಆರ್‌ಟಿಸಿ ಬಸ್‌ಗಳು ಡೀಸೆಲ್ ತುಂಬಿಕೊಳ್ಳಲು ಸಂಚಾರಕ್ಕೆ ಅಡ್ಡಿಯುಂಟು ಮಾಡುವುದನ್ನು ತಪ್ಪಿಸಬೇಕು. ಅನ್ನಪೂರ್ಣ ಆಸ್ಪತ್ರೆ ಮುಂಭಾಗ ಹಂಪ್ ಹಾಕಿಸಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿದರು.
ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಾಗರಿಕ ಸಹಾಯ ಕೇಂದ್ರ ಸುರಕ್ಷಾ ಸ್ವಯಂ ಸೇವಾ ಸಂಸ್ಥೆ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಹಾಯವಾಗಿ ಕಾರ್ಯನಿರ್ವಹಿಸುತ್ತಿದ್ದು ಏಕಾಏಕಿ ಮುಚ್ಚಿರುವುದು ಸರ್ಕಾರದ ಅಮಾಯವೀಯ ಕ್ರಮ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಕೇಂದ್ರವು ತುರ್ತು ಸಮಯದಲ್ಲಿ ರಕ್ತದಾನಿಗಳ ವ್ಯವಸ್ಥೆ, ರಾತ್ರಿ ಸಮಯದಲ್ಲಿ ಅಪಘಾತಕ್ಕೆ ಒಳಗಾದ ಬಡವರಿಗೆ ಉಚಿತ ಚಿಕಿತ್ಸೆ, ಗ್ರಾಮೀಣ ಪ್ರದೇಶದಿಂದ ಬರುವ ರೋಗಿಗಳಿಗೆ ಚಿಕಿತ್ಸೆಯ ಮಾರ್ಗದರ್ಶನ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಆಸ್ಪತ್ರೆ ಬಗ್ಗೆ ಪೂರ್ಣ ಮಾಹಿತಿ ನೀಡುವಂತ ಉತ್ತಮ ಕಾರ್ಯ ನಿರ್ವಹಿಸಿ ಅನುಕೂಲ ಕಲ್ಪಿಸುತ್ತಿದ್ದ ಸಹಾಯ ಕೇಂದ್ರವನ್ನು ಮುಚ್ಚಿ ಅಮಾಯಕರ ಹಿಡಿಶಾಪಕ್ಕೆ ಗುರಿಯಾಗಿದೆ. ಕೂಡಲೇ ಇದನ್ನು ತೆರೆದು ಬಡವರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಇದೇ ಸಂದರ್ಭ ಮುಖಂಡರಾದ ಶಾಂತಕುಮಾರ್, ನಾಗರಾಜ್, ಬಾಲರಾಜೇಗೌಡ, ದಿನೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement