ಕಾಫಿ ನಾಡಿಗೆ ಹೊಸ ರೈಲು ಮಾರ್ಗ
ಚಿಕ್ಕಮಗಳೂರು: ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರು ಮಂಗಳವಾರ ಮಂಡಿಸಿದ ರೈಲ್ವೆ ಬಜೆಟ್ನಲ್ಲಿ ಹೊಸ ರೈಲು ಮಾರ್ಗದ ಸರ್ವೆ ಕಾರ್ಯದಲ್ಲಿ ಶಿವಮೊಗ್ಗ- ಶೃಂಗೇರಿ-ಮಂಗಳೂರು ಮಾರ್ಗ ಸೇರ್ಪಡೆಗೊಂಡಿದೆ.
- ಇದು, ಜಿಲ್ಲೆಯ ಪಾಲಿಗೆ ನಿರೀಕ್ಷಿತ ಫಲಿತಾಂಶ.
ಸದಾನಂದಗೌಡರು ಕೇಂದ್ರ ರೈಲ್ವೆ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದಾಗ ಶೃಂಗೇರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಅವರು ನಡೆದು ಕೊಂಡಿದ್ದಾರೆ. ಕಾಫಿ ನಾಡಿಗೆ ಮತ್ತೊಂದು ರೈಲು ಮಾರ್ಗ ಬರುವುದು ಅತ್ಯಂತ ಸಂತೋಷದಾಯಕ.
ಶಿವಮೊಗ್ಗದಿಂದ ಶೃಂಗೇರಿ, ಅಲ್ಲಿಂದ ಮಂಗಳೂರಿಗೆ ರೈಲ್ವೆ ಮಾರ್ಗ ನಿರ್ಮಾಣ ಮಾಡಿದರೆ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜಿಲ್ಲೆಯ ಇತರೆ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಹೋಲಿಕೆ ಮಾಡಿದರೆ ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಅತ್ಯಧಿಕ. ಇಲ್ಲಿ ಹೊಸ ರೈಲು ಮಾರ್ಗ ನಿರ್ಮಿಸಿದರೆ ಶಿವಮೊಗ್ಗ ಸೇರಿದಂತೆ ಉತ್ತರ ಭಾರತದಿಂದ ಮಂಗಳೂರು ಮಾರ್ಗವಾಗಿ ಶೃಂಗೇರಿಗೆ ಬರುವ ಭಕ್ತರಿಗೂ ಹೆಚ್ಚಿನ ಅನುಕೂಲವಾಗಲಿದೆ.
ಇದು ಸಾಧ್ಯವೇ: ಶಿವಮೊಗ್ಗ - ಶೃಂಗೇರಿ- ಮಂಗಳೂರು ಹೊಸ ರೈಲು ಮಾರ್ಗ ನಿರ್ಮಾಣ ಇದು ಸಾಧ್ಯವೇ
ಈ ಪ್ರಶ್ನೆ ಎದುರಾಗುವುದು ಸಹಜ. ಕಾರಣ, ಪಶ್ಚಿಮಘಟ್ಟದ ತಪ್ಪಲಿನಲ್ಲಿ ಈ ಮಾರ್ಗ ಹಾದು ಹೋಗಲಿದೆ. ಇದಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಇಲ್ಲದೆ ಸರ್ವೆ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ.
ಕೆ.ಎಚ್. ಮುನಿಯಪ್ಪ ರೈಲ್ವೆಯ ರಾಜ್ಯ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದ ಪ್ರವಾಸಿ ಕೇಂದ್ರಗಳನ್ನು ಗಮನದಲ್ಲಿಟ್ಟು ರೈಲ್ವೆ ಬಜೆಟ್ನಲ್ಲಿ ಬೇಲೂರಿನಿಂದ ಶೃಂಗೇರಿಗೆ ಹೊಸ ರೈಲು ಬಿಡಲು ಸರ್ವೆ ಕಾರ್ಯಕ್ಕಾಗಿ ಹಣ ಮೀಸಲಿಡಲಾಗಿತ್ತು. ಇದಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ಅವಶ್ಯಕತೆ ಇದ್ದು, ಇದಕ್ಕಾಗಿ ರೈಲ್ವೆ ಇಲಾಖೆ ಪ್ರಯತ್ನ ಮಾಡಲೇ ಇಲ್ಲ.
ಇದೀಗ ಶಿವಮೊಗ್ಗದಿಂದ ಶೃಂಗೇರಿಗೆ ಅಲ್ಲಿಂದ ಮಂಗಳೂರಿಗೆ ರೈಲು ಬಿಡಲು ಹೊಸ ಮಾರ್ಗಕ್ಕೆ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲು ಬಜೆಟ್ನಲ್ಲಿ ಪ್ರಸ್ತಾಪವಾಗಿದೆ. ಈ ಮಾರ್ಗದಲ್ಲಿ ದಟ್ಟವಾದ ಅರಣ್ಯ, ಸಾಲುಗಟ್ಟಿ ನಿಂತಿರುವ ಬೆಟ್ಟ ಗುಡ್ಡಗಳ ನಡುವೆ ಈ ಮಾರ್ಗ ಹಾದು ಹೋಗಬೇಕಾಗಿದೆ. ಇದಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವುದು ಕಡ್ಡಾಯ. ಅರಣ್ಯ ಇಲಾಖೆ ಒಪ್ಪಿಗೆ ಪತ್ರ ನೀಡಿದ ನಂತರವಷ್ಟೇ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯ.
ಹೆಚ್ಚಿನ ಅನುಕೂಲ: ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ರೈಲು ಬರಬೇಕೆಂಬ ಬಹು ವರ್ಷದ ಆಸೆ ಈಡೇರಿದೆ.
ಚಿಕ್ಕಮಗಳೂರು- ಶಿವಮೊಗ್ಗ ನಡುವೆ ಪ್ರತಿ ದಿನ ರೈಲು ಸಂಚರಿಸುತ್ತಿದೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರೈಲು ಬಿಟ್ಟರೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಬೇಡಿಕೆ ಜಿಲ್ಲೆಯ ಜನತೆಯದ್ದಾಗಿದೆ.
ಲೋಕಸಭಾ ಚುನಾವಣೆ ಪೂರ್ವದಲ್ಲಿ ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ರೈಲು ಬಿಡಲಾಗುವುದು ಎಂದು ಹೇಳಿದ್ದರು. ಆದರೆ, ಈ ಕೆಲಸ ಈವರೆಗೂ ಆಗಿಲ್ಲ.
ಚಿಕ್ಕಮಗಳೂರಿನಿಂದ ಕೊಂಕಣ ರೈಲ್ವೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಚಿಕ್ಕಮಗಳೂರು- ಸಕಲೇಶಪುರ ರೈಲ್ವೆ ಮಾರ್ಗದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಕಾಮಗಾರಿಗಾಗಿ ಈಗಾಗಲೇ ಭೂ ಸ್ವಾಧೀನ ಕಾರ್ಯವೂ ನಡೆಯುತ್ತಿದೆ.
ಚಿಕ್ಕಮಗಳೂರಿನಿಂದ ಸಕಲೇಶಪುರ ಮಾರ್ಗವಾಗಿ ಕೊಂಕಣ ರೈಲ್ವೆಗೆ ಸಂಪರ್ಕ ಏರ್ಪಡಿಸಿ, ಇನ್ನೊಂದೆಡೆ ಶಿವಮೊಗ್ಗ- ಶೃಂಗೇರಿ- ಮಂಗಳೂರು ಮಾರ್ಗವಾಗಿ ಮತ್ತೊಂದು ಹೊಸ ರೈಲು ಬಿಟ್ಟರೆ ಜಿಲ್ಲೆಯ ಬಹುಭಾಗ ಜನರಿಗೆ ರೈಲ್ವೆ ಪ್ರಯಾಣಕ್ಕೆ ಅನುಕೂಲವಾಗಲಿದೆ.
ಆರ್. ತಾರಾನಾಥ್