ಲಂಚ: ಉಪ ನೋಂದಣಾಧಿಕಾರಿ, ಇಬ್ಬರು ಮಧ್ಯವರ್ತಿಗಳ ಬಂಧನ
ಕಡೂರು: ಕಚೇರಿಯಲ್ಲಿ ಮಧ್ಯವರ್ತಿಗಳ ಮೂಲಕ ಲಂಚ ಪಡೆಯುತ್ತಿರುವ ಖಚಿತ ವರ್ತಮಾನದ ಮೇರೆಗೆ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ದಾಳಿ ನಡೆಸಿ ಉಪ ನೋಂದಣಾಧಿಕಾರಿ ಮತ್ತು ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿರುವುದಾಗಿ ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ಪಿ ಶೇಖ್ಹುಸೇನ್ ತಿಳಿಸಿದ್ದಾರೆ.
ಕಡೂರು ಉಪ ನೋಂದಣಾಧಿಕಾರಿ ಪ್ರಮೋದ್ ಅವರು ನೋಂದಣಿ ಖಾತೆ ಬದಲಾವಣೆ ಮತ್ತಿತರ ಕೆಲಸಗಳಿಗೆ ಖಾಸಗಿ ವ್ಯಕ್ತಿಗಳನ್ನು ಮಧ್ಯವರ್ತಿಗಳನ್ನಾಗಿ ನೇಮಿಸಿಕೊಂಡು ಅವರಿಂದ ಲಂಚದ ಹಣ ಪಡೆಯುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ ಲೋಕಾಯುಕ್ತರು ದಾಳಿ ನಡೆಸಿದರು.
ಕಚೇರಿಯ ದಾಖಲೆಗಳಂತೆ ಸೋಮವಾರ ಕಚೇರಿ ವ್ಯವಹಾರದ ಮೊತ್ತ ರು. 69,995 ಗಳನ್ನು ಲೋಕಾಯಕ್ತರು ತಮ್ಮ ವಶಕ್ಕೆ ಪಡೆದಿದ್ದಾರೆ. ಸೋಮವಾರ ನಡೆದ ಕಚೇರಿ ವ್ಯವಹಾರದಲ್ಲಿ ರು. 1945 ಕಡಿಮೆಯಿದ್ದು ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಪ ನೋಂದಾಣಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿ ಮಧ್ಯವರ್ತಿಗಳಾದ ವಿ. ಕೃಷ್ಣಮೂರ್ತಿ ಮತ್ತು ರೇವಣ್ಣ ಅವರ ಬಳಿ ಇದ್ದ ರು. 6015 ಮತ್ತು ರು. 9250 ಗಳನ್ನು ಲೋಕಾಯುಕ್ತರು ವಶಪಡಿಸಿಕೊಂಡು ನೋಂದಣಾಧಿಕಾರಿ ಪ್ರಮೋದ್, ಕೃಷ್ಣಮೂರ್ತಿ ಹಾಗೂ ರೇವಣ್ಣರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹುಸೇನ್ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಸಂಪತ್ಕುಮಾರ್, ಜಯಾನಂದ್, ಸಿಬ್ಬಂದಿ ಬಸವರಾಜ್, ಓಂಕಾರಪ್ಪ, ಶಿವಣ್ಣ, ಧರ್ಮೇಗೌಡ, ಲೋಕೇಶ್, ಉಮೇಶ್ ಇತರರು ಪಾಲ್ಗೊಂಡಿದ್ದರು.