ಹವಾಮಾನ ವೈಪರೀತ್ಯದಿಂದ ಮಳೆ ಕೊರತೆ
ಮೂಡಿಗೆರೆ: ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದೆ. ಸಕಾಲದಲ್ಲಿ ಮಳೆ ಇಲ್ಲದೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಹೆಚ್ಚು ಗಿಡಗಳನ್ನು ನೆಟ್ಟು ಅವನ್ನು ವೃಕ್ಷಗಳನ್ನಾಗಿ ಬೆಳೆಸಿ, ರಕ್ಷಿಸುವುದರಿಂದ ಮಾತ್ರ ಈ ಅಸಮತೋಲನ ನಿವಾರಣೆ ಸಾಧ್ಯ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಯು.ಎಚ್. ಹೇಮಶೇಖರ್ ಅಭಿಪ್ರಾಯಿಸಿದರು.
ಇಲ್ಲಿನ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ಪಟ್ಟಣದ ನಳಂದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ವೃಕ್ಷಪ್ರೀತಿ ಮೆರೆದ ಸಾಲುಮರ ತಿಮ್ಮಕ್ಕ ಅವರ ಸೇವೆ, ಆದರ್ಶವನ್ನು ವಿದ್ಯಾರ್ಥಿಗಳು ಅರಿತು ಪಾಲಿಸಬೇಕು ಎಂದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹಳೇಕೋಟೆ ರಮೇಶ್ ಮಾತನಾಡಿದರು. ಅರಣ್ಯಾಧಿಕಾರಿ ಸುದರ್ಶನ್, ಠಾಣಾಧಿಕಾರಿ ಅನಂತಪದ್ಮನಾಭ್ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಲಯನೆಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಹೇಮಶೇಖರ್, ಮಾಜಿ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್, ಜಿ.ಪಂ. ಸದಸ್ಯ ಎಂ.ಎಸ್. ಅನಂತು, ಎಚ್.ಟಿ. ರವೀಂದ್ರ, ಬಿ.ಎಸ್. ಜಯರಾಂ, ಜಗಮೋಹನ್, ಪ್ರಣತಿ ಪ್ರದೀಪ್ ಇತರರು ಇದ್ದರು.