ಕೇಂದ್ರೀಯ ಶಾಲೆ ಪುನರಾರಂಭ
ಚಿಕ್ಕಮಗಳೂರು: ಕುದುರೆಮುಖದ ಕೇಂದ್ರೀಯ ವಿದ್ಯಾಲಯದ ಪುನಾರಂಭದ ಬಿಕ್ಕಟ್ಟು ನಿವಾರಣೆಯಾಗಿದೆ.
ಈ ಶಾಲೆಯನ್ನು ಮುಂದುವರಿಸಲು ಬೇಕಾಗುವ ಅನುದಾನ ನೀಡಲು ಕುದುರೆಮುಖ ಅದಿರು ಕಂಪನಿ ಒಪ್ಪಿಕೊಂಡಿದೆ. ಆದುದರಿಂದ ಈ ಶಾಲೆಯನ್ನು ಪುನಾರಂಭಕ್ಕೆ ಇದ್ದ ತೊಡಕುಗಳು ನಿವಾರಣೆಯಾಗಿವೆ. ಕುದುರೆಮುಖದ ಕೇಂದ್ರೀಯ ವಿದ್ಯಾಲಯದಲ್ಲಿ ಸಿಬಿಎಸ್ಸಿ ಪಠ್ಯ ಕ್ರಮದ ಪ್ರಕಾರ ಪಾಠ ಪ್ರವಚನ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಶಿಕ್ಷಣ ಕಾಯ್ದೆಯ ಪ್ರಕಾರ ಸಿಬಿಎಸ್ಸಿ ಪಠ್ಯಕ್ರಮದಡಿಯಲ್ಲಿ ಯಾವುದೇ ಶಾಲೆ ನಡೆಸಲು ಕಾಯ್ದೆಯಲ್ಲಿ ಅವಕಾಶ ಇಲ್ಲ. ಈ ವಿಷಯವನ್ನು ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿತ್ತು. ಇದರ ಜತೆಗೆ ಈ ಶಾಲೆಯನ್ನು ಪುನಾರಂಭಕ್ಕೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದು, ಸದ್ಯ ಶಾಲೆ ಆರಂಭಗೊಂಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ, ಕುದುರೆಮುಖ ಅದಿರು ಕಂಪನಿಯ ಮುಖ್ಯಸ್ಥರ ಸಭೆ ಮಂಗಳವಾರ ನಡೆಯಿತು.
ಈ ಸಭೆಯಲ್ಲಿ ಭಾಗವಹಿಸಿದ್ದ ಕುದುರೆಮುಖ ಅದಿರು ಕಂಪನಿಯ ಪ್ರಧಾನ ವ್ಯವಸ್ಥಾಪಕ ಬಾಲಕೃಷ್ಣ ಅವರಿಗೆ ಈವರೆಗೆ ಸರ್ಕಾರದ ಮಟ್ಟದಲ್ಲಿ ಆಗಿರುವ ಚರ್ಚೆ ಹಾಗೂ ಕಂಪನಿಯ ತೀರ್ಮಾನದ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಕುದುರೆಮುಖದಲ್ಲಿನ ಕೇಂದ್ರೀಯ ವಿದ್ಯಾಲಯ ಮುಚ್ಚಲಾಗಿದೆ ಎಂದು ಕೆವಿಎಸ್ ತನ್ನ ದಾಖಲೆಯಲ್ಲಿ ತಿಳಿಸಿದ್ದು, ಇದೀಗ ಕುದುರೆಮುಖದ ಶಾಲೆಗೆ ಹೊಸದಾಗಿ ಶಿಕ್ಷಕರನ್ನು ನೇಮಕ ಮಾಡಬೇಕಾಗಿದೆ. ಈ ಶಾಲೆಗೆ ಬೇಕಾದ ಅನುದಾನ ನೀಡಲು ಕೆಐಓಸಿಎಲ್ ಒಪ್ಪಿಕೊಂಡಿದ್ದು, ಈ ಶಾಲೆಗೆ ಅಗತ್ಯವಿರುವ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಜಿಲ್ಲಾಡಳಿತ ಬುಧವಾರದಂದು ಪತ್ರ ಬರೆದಿದೆ.
ಮುಚ್ಚಿರುವ ಈ ಶಾಲೆಯನ್ನು ಹೊಸದಾಗಿ ಕೆವಿಎಸ್ನಲ್ಲಿ ಮರು ನೋಂದಣಿ ಮಾಡಬೇಕಾಗಿದ್ದು, ಈ ಸಂಬಂಧ ಪತ್ರ ವ್ಯವಹಾರ ನಡೆಸಲು ಬಾಳೆಹೊನ್ನೂರಿನ ನವೋದಯ ಶಾಲೆಯ ಪ್ರಾಂಶುಪಾಲರಾದ ರಾಮಿರೆಡ್ಡಿ ಅವರಿಗೆ ಜಿಲ್ಲಾಡಳಿತ ಜವಾಬ್ದಾರಿ ವಹಿಸಿದೆ. ಒಟ್ಟಾರೆ ಕೇಂದ್ರೀಯ ವಿದ್ಯಾಲಯ ಶಾಲೆಯ ಪುನಾರಂಭದ ಬಿಕ್ಕಟ್ಟು ನಿವಾರಣೆಯಾದಂತಾಗಿದೆ.
ಕುದುರೆಮುಖ ಗಣಿಗಾರಿಕೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕೇಂದ್ರೀಯ ವಿದ್ಯಾಲಯ ಸಂಘಟನ್ ಕುದುರೆಮುಖ ಅದಿರು ಕಂಪನಿಯ ಅನುದಾನದಲ್ಲಿ ಶಾಲೆ ನಡೆಸುತ್ತಿತ್ತು. ಗಣಿಗಾರಿಕೆ ನಿಂತಿದ್ದರಿಂದ ಹಣಕಾಸಿನ ತೊಂದರೆ ಇರುವುದರಿಂದ ಶಾಲೆಗೆ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಕಂಪನಿ ಹೇಳುತ್ತಿದ್ದಂತೆ ಕೇಂದ್ರೀಯ ವಿದ್ಯಾಲಯ ಸಂಘಟನ್(ಕೆವಿಎಸ್) ಈ ಶಾಲೆಯನ್ನು ಮುಚ್ಚುವ ತೀರ್ಮಾನಕ್ಕೆ ಬಂದಿತ್ತು.
ಇದನ್ನು ಪ್ರಶ್ನಿಸಿ ಇದೇ ಶಾಲೆಯ ವಿದ್ಯಾರ್ಥಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಮೇರೆಗೆ ಈ ಶಾಲೆಯನ್ನು ರಾಜ್ಯ ಸರ್ಕಾರವೇ ತಾತ್ಕಾಲಿಕವಾಗಿ ನಡೆಸಲು ನ್ಯಾಯಾಲಯ ಸೂಚನೆ ನೀಡಿತ್ತು. ಈ ಆದೇಶವನ್ನು ಸಕಾಲದಲ್ಲಿ ಪಾಲನೆ ಮಾಡದೆ ಇರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯದ ಆದೇಶ ಪಾಲನೆ ಮಾಡದ ಕಾರಣ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿಯಾಗಿತ್ತು.