ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪರಿಹಾರ ಚಿಂತನೆ ನಡೆಸಿ

Mainashree
Updated On : 12 Jul 2014, 10:33 am

ಚಿಕ್ಕಮಗಳೂರು: ಕಳಸ ಇನಾಂಭೂಮಿ ಸಮಸ್ಯೆ ಬಗ್ಗೆ ಸರಕಾರ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರ ಸಭೆ ಕರೆದು ಪರಿಹಾರಕ್ಕೆ ಚಿಂತನೆ ನಡೆಸದಿದ್ದರೆ ಆ. 15 ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಹೇಳಿದ್ದಾರೆ.
ಜನರ ವಿರೋಧದ ನಂತರ ರಾಜ್ಯ ಸರಕಾರ ಇನಾಂಭೂಮಿ ಕೃಷಿಕರ ಪರವಾಗಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಆದರೆ, ಈವರೆಗೂ ಕೃಷಿಕರ ಪರವಾಗಿ ಧ್ವನಿ ಎತ್ತದೆ, ಅವರಿಗೆ ಭದ್ರತೆ ಒದಗಿಸದ ಕಾರಣ ಇಂದು ಸಾವಿರಾರು ರೈತ, ಕೃಷಿ ಕಾರ್ಮಿಕರು ಬೀದಿ ಪಾಲಾಗಬೇಕಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರಕಾರದ ಶಾಸನಬದ್ಧ ಅಧಿಕಾರ ಹೊಂದಿದ ಅಧಿಕಾರಿಗಳು ಕಳಸದಲ್ಲಿ ಮಂಜೂರು ಮಾಡಿರುವ ಭೂಮಿ, ಸರಕಾರಿ ಕಟ್ಟಡ, ಶಾಲೆಗಳು, ದೇವಸ್ಥಾನಗಳು, ಸಾವಿರಾರು ಕೋಟಿ ಮೂಲಸೌಕರ್ಯ ಅಭಿವೃದ್ಧಿ ಇವೆಲ್ಲವನ್ನು  ನ್ಯಾಯಲಯಕ್ಕೆ ಅಧಿಕಾರಿಗಳು ಮರೆಮಾಚಿದ ಪರಿಣಾಮ ಇಂದು ರೈತರಿಗೆ ಈ ದುಸ್ಥಿತಿ ಒದಗಿದೆ ಎಂದು ಆರೋಪಿಸಿದರು.
1928 ರ ಅಧಿಸೂಚನೆ ಹಿಂದಕ್ಕೆ ಪಡೆಯಬೇಕು:   ಕಳಸ ಇನಾಂಭೂಮಿ ರೈತರ ಸಮಸ್ಯೆಗೆ ಮೂಲಕಾರಣವಾಗಿರುವ 1928 ರ ಅಧಿಸೂಚನೆಯನ್ನು ಸರಕಾರ ಹಿಂದಕ್ಕೆ ಪಡೆಯಬೇಕು. 1980 ರ ಅರಣ್ಯ ಸಂರಕ್ಷಣಾ ಕಾಯ್ದೆಯು ಜಾರಿಗೆ ಬಂದ ಹಿಂದಿನ ಅವಧಿಗೆ ಸಂಬಂಸಿದಂತೆ ಒತ್ತುವರಿದಾರರ ಹಕ್ಕುಬಾಧ್ಯತೆಗಳನ್ನು ಪರಿಶೀಲಿಸಲು ಯಾವುದೇ ಪ್ರತಿಬಂಧವಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವಾಲಯ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಕೇಂದ್ರ ಸರಕಾರ ನ್ಯಾಯಾಲಯ ಹೇರಿರುವ ಪ್ರತಿಬಂಧಕಗಳನ್ನು ಮಾರ್ಪಾಡು ಮಾಡುವ ಬಗ್ಗೆ ಹಾಗೂ ಹಕ್ಕುಬಾಧ್ಯತೆಗಳನ್ನು ಪರಿಶೀಲಿಸಲು ರಾಜ್ಯ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ. ಬಾಲಸುಬ್ರಮಣ್ಯಂ ಸಮಿತಿ ವರದಿ ಜಾರಿಯಾದಲ್ಲಿ ಜೀವನ ಭದ್ರತೆಗಾಗಿ ಭೂಮಿಯನ್ನೇ ನಂಬಿ ಬದುಕುತ್ತಿರುವ ಕಳಸ ಭಾಗದ ಸಾವಿರಾರು ಕುಟುಂಬಗಳು ಬೀದಿಪಾಲಾಗಲಿವೆ. ಈ ಹಿನ್ನಲೆಯಲ್ಲಿ ಆ ವರದಿಯನ್ನು ಮರು ಪರಿಶೀಲಿಸಬೇಕು. ಸುಪ್ರೀಂಕೋರ್ಟ್ ತೀರ್ಪು ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆಯ ನೆಪವೊಡ್ಡಿ, ಅರಣ್ಯ ಅಭಿವೃದ್ಧಿ, ಪರಿಸರದ ಹೆಸರಲ್ಲಿ ಬಡವರನ್ನು ಭೂಮಿಯಿಂದ ಹೊರಹಾಕಲು ಪ್ರಯತ್ನಿಸುತ್ತಿರುವುದನ್ನು ಸರಕಾರ ತಕ್ಷಣದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ. ದಯಾಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ನಾಗರಾಜ್, ಇನಾಂ ಹೋರಾಟ ಸಮಿತಿ ಸಂಚಾಲಕ ಬಿ. ಸವಿಂಜಯ, ಜಗದೀಶ್, ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement