ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲೇಖಕಿಯರಿಗೆ ವಿಷಯ ಹೇರಿಕೆ ಸಲ್ಲ

Mainashree
Updated On : 13 Jul 2014, 11:07 am

ಚಿತ್ರದುರ್ಗ: ರಾಜ್ಯದಲ್ಲಿನ ವೈದಿಕ ಮಠಗಳು ಸರಿಯಾದ ರೀತಿಯಲ್ಲಿ ನಡೆಯದೆ ಜನರಲ್ಲಿ ಅಸಮಾನತೆ ಉಂಟು ಮಾಡುತ್ತಿವೆ ಎಂದು ಸಾಹಿತಿ ಎಚ್.ನಾಗವೇಣಿಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಊರು ದಕ್ಷಿಣಕನ್ನಡ. ಅಲ್ಲಿ ವೈದಿಕ ಮಠಗಳ ಸಂಖ್ಯೆ ಹೆಚ್ಚು. ಇಲ್ಲಿ ದಲಿತರನ್ನು ಮಠದ ಒಳಗಡೆ ಬಿಡುವುದಿಲ್ಲ. ಆದರೆ, ದಲಿತರ ಕೇರಿಗಳಿಗೆ ಹೋಗಿ ದಲಿತರನ್ನು ದೂರ ಇಡುತ್ತಿದ್ದಾರೆ. ಇದರಂತೆ ರಾಜ್ಯದ ಎಲ್ಲಾ ಮಠಗಳು ಇರುತ್ತವೆ ಎಂದುಕೊಂಡಿದ್ದೆ. ಆದರೆ, ಮಧ್ಯ ಕರ್ನಾಟಕದಲ್ಲಿನ ಮಠಗಳ ವಿಶಿಷ್ಟತೆ ಬೇರೆಯಾಗಿದೆ. ಇಲ್ಲಿ ಎಲ್ಲೆಡೆ ಸಮಾನತೆ ಇದೆ. ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕುವ ಮಾತೃ ಹೃದಯದ ಸ್ವಾಮಿಗಳಿದ್ದಾರೆ. ಇದರಿಂದ ನನ್ನ ಮನದಲ್ಲಿ ಮಠಗಳ ಬಗ್ಗೆ ಇದ್ದ ಅಭಿಪ್ರಾಯ ಸ್ವಲ್ಪಮಟ್ಟಿಗೆ ಬದಲಾಗಿದೆ ಎಂದರು.
ಲೇಖಕಿಯರು ಬರೆದ ಹಲವಾರು ಪುಸ್ತಕಗಳನ್ನು ಪುರುಷ ಲೇಖಕರು ಒಪ್ಪಿಕೊಳ್ಳುತ್ತಿಲ್ಲ. ಲೇಖಕಿಯರು ನಿರ್ದಿಷ್ಟವಾದ ವಿಷಯದ ಮೇಲೆ ಮಾತ್ರ ಬರೆಯಬೇಕೆಂಬುದು ದೌರ್ಜನ್ಯ. ಮಹಿಳಾ ಲೇಖಕರಿಗೆ ಸರಿಯಾದ ವಾತಾವರಣ ಸಿಗುವುದಿಲ್ಲ. ಕೆಲವೊಮ್ಮೆ ಮಡಿವಂತಿಕೆಯ ವಿಷಯವನ್ನು ಅನುಭವ ಇಲ್ಲದ ಪುರುಷ ಲೇಖಕರು ಬರೆಯುತ್ತಾರೆ.
ಆದರೆ, ಅದನ್ನು ಅನುಭವಿಸುವ ಮಹಿಳಾ ಲೇಖಕಿ ಅದರ ಬಗ್ಗೆ ಬರೆಯುವ ಹಾಗಿಲ್ಲ ಎನ್ನುವುದು ದುರಂತ. ಸಂವಿಧಾನ ಯಾವುದೇ ಲಿಂಗಭೇದ ಮಾಡದೆ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ. ಆದರೆ, ಇದನ್ನು ಅನುಭವಿಸುವ ಜನತೆ ಮಾತ್ರ ಲಿಂಗಭೇದ ಮಾಡುತ್ತಾ ಶೋಷಣೆ ಮಾಡುತ್ತಿದ್ದಾರೆ. ನಮ್ಮ ರಕ್ಷಣೆಗೆ ಯಾವ ಸರ್ಕಾರವಾಗಲಿ, ಕಾನೂನಾಗಲಿ ಬರುವುದಿಲ್ಲ, ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ನಾಗವೇಣಿ ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಸಾಹಿತ್ಯ ಅಕಾಡೆಮಿ ರಾಜ್ಯದಲ್ಲಿ ಯುವ ಬರಹಗಾರರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ. ಇದಕ್ಕಾಗಿ ಕಾರ್ಯಾಗಾರ, ಕಮ್ಮಟ, ಶಿಬಿರ, ಲೇಖಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸಾಹಿತ್ಯ ಮತ್ತು ಜನತೆಯ ನಡುವೆ ಉತ್ತಮವಾದ ಬಾಂಧವ್ಯ ಕಾಣುತ್ತಿಲ್ಲ. ಇದರ ಬದಲಿಗೆ ಕಂದಕ ಕಾಣುತ್ತಿದೆ. ಸಾಹಿತಿಗಳು ಬರೆದ ಪುಸ್ತಕವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಅರ್ಥ ಸಾಮಾನ್ಯ ಜನತೆಗೆ ಬೇಕಾದ ಸಾಹಿತ್ಯವನ್ನು ಲೇಖಕರು ನೀಡುತ್ತಿಲ್ಲ ಎನ್ನುವುದಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತಿಗಳಾದವರು ಸಾಮಾನ್ಯ ಜನತೆಗೆ ಹತ್ತಿರವಾಗುವ ಸಾಹಿತ್ಯ ರಚನೆಗೆ ಹೆಚ್ಚಿನ ಒತ್ತು ನೀಡಬೇಕು. ಜನತೆಯ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ತಿಳಿಸುವ ಕಾರ್ಯ ಸಾಹಿತ್ಯದಿಂದ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶೂದ್ರ ಶ್ರೀನಿವಾಸ್, ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶರಣಪ್ಪ, ರಿಜಿಸ್ಟ್ರಾರ್ ಭಾಗ್ಯ ಭಾಗವಹಿಸಿದ್ದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜನತೆಗೆ ಕೇಳಿದ ಪ್ರಶ್ನೆಗೆ ಲೇಖಕಿ ನಾಗವೇಣಿ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement