ದೇಶ ಸೇವೆಯ ಮನೋಭಾವ ಅವಶ್ಯ
ಶೃಂಗೇರಿ: ಸಮಾಜ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ ಸಮಾಜ ಹಾಗೂ ದೇಶಕ್ಕೆ ನಮ್ಮಿಂದ ಕೊಡುಗೆ ಏನು ಎನ್ನುವುದು ಮುಖ್ಯ. ಸಮಾಜದಿಂದ ಅಪಾರವಾದುದನ್ನು ಪಡೆಯುವ ನಾವು ಅದಕ್ಕೆ ಪೂರಕವಾಗಿ ಸಮಾಜಕ್ಕೆ ಕಿಂಚಿತ್ತಾದರೂ ಉತ್ತಮ ಸೇವೆ ನೀಡಬೇಕು. ಸಮಾಜದ ವಿಕಾಸದಲ್ಲಿ ಸಮರ್ಪಣಾ ಮನೋಭಾವದ ಅವಶ್ಯಕತೆಯಿದೆ ಎಂದು ಆರ್‌ಎಸ್‌ಎಸ್ ಪ್ರಾಂತ ಸೇವಾ ಪ್ರಮುಖ್ ಸದಾಶಿವ ಹೇಳಿದರು.
ಪಟ್ಟಣದ ಜಿಎಸ್‌ಬಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆರ್‌ಎಸ್‌ಎಸ್ ಶಾಖೆಯ ಗುರುಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಬದುಕಿಗೆ ಒಳ್ಳೆಯದನ್ನು ಕಲಿಸುವ ಪ್ರತಿಯೊಬ್ಬ ವ್ಯಕ್ತಿ ಸಂದೇಶ, ಜಡ, ಸೃಷ್ಟಿ ಎಲ್ಲವೂ ಅರ್ಪಣಾ ಭಾವ ಹಾಗೂ ಗುರುತ್ವವನ್ನು ಸಾರುತ್ತದೆ. ಸಂಘದಲ್ಲಿ ಭಗವಾಧ್ವಜವು ಸಮರ್ಪಣಾ ತತ್ವ ಪ್ರತಿಪಾದಿಸುತ್ತಿದೆ. ಸ್ವಯಂ ಸೇವಕರು ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಘ ಕಾರ್ಯಕ್ಕಾಗಿ ತನ್ನ ಸಂಪಾದನೆ. ಒಂದು ಭಾಗವನ್ನು ಗುರುಕಾಣಿಕೆಯಾಗಿ ಅರ್ಪಿಸುವುದು ಈ ದಿನದ ವಿಶೇಷ ಎಂದರು.
ಭಗವಂತನ ಕೃಪೆಯಿಂದ ಭಾರತವು ಉಳಿದೆಲ್ಲಾ ದೇಶಗಳಿಗಿಂತ ಸಂಪತ್ ಸಮೃದ್ಧವಾಗಿದೆ. ಆದರೆ, ಬ್ರಿಟಿಷರ ದಾಸ್ಯದಡಿ ಹುಟ್ಟಿರುವ ಕೀಳರಿಮೆಯಿಂದಾಗಿ ನಾವಿನ್ನೂ ಕಳಪೆಯಾಗಿಯೇ ಉಳಿದಿದ್ದೇವೆ ಎಂದರು.
ಬೇಗಾರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಪಿ.ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಖೆಯ ಹಿರಿ-ಕಿರಿಯ ಸ್ವಯಂ ಸೇವಕರು, ಸಂಘ ಸಂಸ್ಥಾಪಕ ಡಾಕ್ಚರ್‌ಜಿ ಹಾಗೂ ಗುರೂಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಭಗವಾಧ್ವಜಕ್ಕೆ ವಂದನೆ ಸಲ್ಲಿಸಿ, ಗುರುಕಾಣಿಕೆ ಸಲ್ಲಿಸಿದರು.