ತಗ್ಗಿದ ನದಿ ನೀರಿನ ಮಟ್ಟ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲೂ ಸೋಮವಾರ ಮಳೆ ಅಲ್ಪಪ್ರಮಾಣದಲ್ಲಿ ಇಳಿಮುಖವಾಗಿದ್ದು, ತುಂಗಾ ಹಾಗೂ ಭದ್ರಾ ನದಿಗಳ ನೀರಿನ ಮಟ್ಟ ಕಡಿಮೆಯಾಗಿದೆ.
ಕಳೆದ 24 ಗಂಟೆ ಕಾಲ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕೆಲವೆಡೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು. ಮಳೆ ಇಳಿಮುಖವಾಗಿದ್ದರಿಂದ ನೀರಿನ ಮಟ್ಟ ತಗ್ಗಿದೆ. ಆದರೆ, ಬಲವಾಗಿ ಗಾಳಿ ಬೀಸುತ್ತಿರುವುದರಿಂದ ಮಲೆನಾಡಿನ ಹಲವೆಡೆ ಮರಗಳು ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಾಯ ಉಂಟಾಗಿದ್ದು, ಪ್ರಮುಖವಾಗಿ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಈ ಸಮಸ್ಯೆ ಎದುರಾಗಿದೆ.
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಇನ್ನುಳಿದಂತೆ ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಆಗಾಗ ತುಂತುರು ಮಳೆ ಬಂದು ಹೋಗುತ್ತಿತ್ತು.
ಕಮ್ಮರಡಿಯಲ್ಲಿ ಅತಿ ಹೆಚ್ಚು ಮಳೆ: ಕಳೆದ 24 ಗಂಟೆಗಳಲ್ಲಿ ಕೊಪ್ಪ ತಾಲೂಕಿನ ಕಮ್ಮರಡಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದಿದೆ. ಅಂದರೆ, 197.7 ಮಿ.ಮೀ. ಮಳೆಯಾಗಿದೆ. ಇನ್ನುಳಿದಂತೆ ಚಿಕ್ಕಮಗಳೂರು ನಗರ- 6.4, ವಸ್ತಾರೆ- 20, ಜೋಳ್ದಾಳ್- 21, ಆಲ್ದೂರು- 36.8, ಅತ್ತಿಗುಂಡಿ- 44.5, ಸಂಗಮೇಶ್ವರಪೇಟೆ- 57, ಬ್ಯಾರವಳ್ಳಿ- 49.2, ಕಡೂರು- 9.5, ಸಿಂಗಟಗೆರೆ- 5.8, ಸಖರಾಯಪಟ್ಟಣ- 14.4, ಬೀರೂರು- 5.6, ಕೊಪ್ಪ- 150.2, ಹರಿಹರಪುರ- 185.4, ಜಯಪುರ- 124.2, ಬಸರೀಕಟ್ಟೆ- 107.8, ಮೂಡಿಗೆರೆ- 83.4, ಕೊಟ್ಟಿಗೆಹಾರ- 89.6, ಜಾವಳಿ- 100, ಕಳಸ- 91.4, ಶೃಂಗೇರಿ- 149, ಕಿಗ್ಗಾ- 178, ಕೆರೆಕಟ್ಟೆ- 189, ತರೀಕೆರೆ- 14, ಲಕ್ಕವಳ್ಳಿ- 24.6, ಅಜ್ಜಂಪುರ- 4.2, ತಣಿಗೇಬೈಲು- 31, ರಂಗೇನಹಳ್ಳಿಯಲ್ಲಿ 19.8 ಮಿ.ಮೀ. ಮಳೆ ಬಂದಿದೆ.