ಬೆಳೆಸಿದ ಮರಗಳೇ ನನಗೀಗ ಆಸರೆ
ಕಡೂರು: ಚಿಕ್ಕ ವಯಸ್ಸಿನಲ್ಲಿ ನೆಟ್ಟು ಬೆಳೆಸಿದ ಗಿಡಗಳು ಮರಗಳಾಗಿ ಮುಂದೆ ನಿಮಗೆ ಆಸರೆ ನೀಡುವ ಮೂಲಕ ನಿಮ್ಮನ್ನು ಹಾಗೂ ಪರಿಸರವನ್ನು ಸಂರಕ್ಷಿಸುತ್ತವೆ ಎಂದು ಪದ್ಮಭೂಷಣ, ನಾಡೋಜ ಸಾಲುಮರದ ತಿಮ್ಮಕ್ಕ ಹೇಳಿದರು.
ತಾಲೂಕಿನ ಬೀರೂರು ವಲಯ ಲಕ್ಷ್ಮೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ವನ ಮಹೋತ್ಸಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂದೆ ತಾಯಿಗೆ ಮಕ್ಕಳು ಕಡೆಗಾಲದಲ್ಲಿ ಆಸರೆಯಾಗಿ ನಿಲ್ಲುತ್ತಾರೆ. ಆದರೆ ತಮಗೆ ಇಂತಹ ಭಾಗ್ಯ ಸಿಗಲಿಲ್ಲ. ಆದರೆ ನನ್ನ ಮಕ್ಕಳಿಗಿಂತ ಹೆಚ್ಚಾಗಿ ನಾನು ಬೆಳೆಸಿದ ಮರಗಳು ನನ್ನ ಕಡೆಗಾಲದಲ್ಲಿ ಆಸರೆಯಾಗಿ ನಿಂತಿರುವುದು ನನ್ನ ಅದೃಷ್ಟ.
ಮಕ್ಕಳಾದ ನೀವು ಕೂಡಾ ಚಿಕ್ಕ ವಯಸ್ಸಿನಲ್ಲಿ ಗಿಡ ಮರಗಳನ್ನು ಬೆಳೆಸಿ ದೇಶಕ್ಕೆ ನೀಡಿದಲ್ಲಿ ಅವು ದೇಶದ ಸಂಪತ್ತಾಗುವ ಮೂಲಕ ನಿಮಗೆ ಕಡೆಗಾಲದಲ್ಲಿ ಆಸರೆಯಾಗಿ ನಿಲ್ಲುತ್ತವೆ ಎಂದು ತಿಳಿಸಿದರು.
ನಾನು ಹಾಗೂ ನನ್ನ ಪತಿ ಬಿಕ್ಕಲ ಚಿಕ್ಕಯ್ಯ ಸೇರಿ ಬೆಳೆಸಿದ ಮರಗಳು ಇಂದು ನಮಗೆ ಆಸರೆಯಾಗಿ ನಿಂತು ಎಲ್ಲರೂ ಕೂಡ ಪರಿಸರ ಸಂರಕ್ಷಿಸಬೇಕು ಎಂಬ ಸಂದೇಶ ಸಾರಿರುವುದು ನಮಗೆ ಹೆಮ್ಮೆ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ಶಾಲೆ ವತಿಯಿಂದ ಮತ್ತು ಲಕ್ಷ್ಮೀಪುರ ಗ್ರಾಮಸ್ಥರಿಂದ ಸಾಲು ಮರದ ತಿಮ್ಮಕ್ಕನವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಅರಣ್ಯಾಧಿಕಾರಿ ಸುರೇಶ್, ಮುಖ್ಯ ಶಿಕ್ಷಕ ಸಿದ್ದೇಗೌಡ, ಶಿಕ್ಷಕ ಎ.ಪಿ. ಧನಂಜಯಮೂರ್ತಿ, ಚಂದ್ರಶೇಖರ್, ಪರಮೇಶ್ವರಪ್ಪ, ಶಾಲಾ ಸಿಬ್ಬಂದಿ, ಮಕ್ಕಳು ಮತ್ತು ಗ್ರಾಮಸ್ಥರು ಇದ್ದರು.