ಅತಿ-ಅನಾವೃಷ್ಟಿ ನಿಭಾಯಿಸಲು ಸಿದ್ಧತೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಛಾಯೆ ಕಾಣಿಸುತ್ತಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗಿ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿ ಮಳೆಯಿಂದಾಗಿ ಅತಿವೃಷ್ಟಿ ಹಾಗೂ ಬಯಲುಸೀಮೆ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಅನಾವೃಷ್ಟಿ ಛಾಯೆ ಕಾಣಿಸುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಿಕೊಳ್ಳಲು ರೂಪುರೇಷೆ ಸಿದ್ಧಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳಬೇಕು. ರೈತರು ಸಾಕಷ್ಟು ಬಂಡವಾಳ ಹೂಡಿ ಬಿತ್ತನೆ ಬೀಜ, ಗೊಬ್ಬರ ಹಾಕಿದ್ದಾರೆ. ಮಳೆ ಸಮಯಕ್ಕೆ ಸರಿಯಾಗಿ ಬಾರದೆ ಬೆಳೆಗಳು ಒಣಗುತ್ತಿವೆ. ತಡವಾಗಿ ಮಳೆಯಾದ ಹಿನ್ನೆಲೆ ರೈತರಿಗೆ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ಸಲಹೆ ನೀಡಬೇಕೆಂದರು.
ಅಡಕೆಗೆ ಕೊಳೆ ರೋಗ ಸಾಧ್ಯತೆ: ಮಲೆನಾಡು ಭಾಗದಲ್ಲಿ ಅತಿಯಾಗಿ ಮಳೆಯಾಗಿದ್ದು, ಅಡಕೆ ಬೆಳೆಗೆ ಕೊಳೆ ರೋಗ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈತರಿಗೆ ರೋಗ ತಡೆಗೆ ಅಗತ್ಯ ಮಾಹಿತಿ ನೀಡಬೇಕೆಂದರು.
ಸಂಕಷ್ಟ ಪರಿಸ್ಥಿತಿ ಎದುರಿಸಲು ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ಸಭೆ ಕರೆಯಬೇಕು ಎಂದ ಅವರು, ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಅನಾಹುತವಾದ ಪ್ರದೇಶಗಳನ್ನು ಗುರುತಿಸುವುದರೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಆಗುವ ಅನಾಹುತಗಳನ್ನು ತಪ್ಪಿಸಲು ಮುಂದಾಗುವಂತೆ ತಿಳಿಸಿದರು.
ಹವಾಮಾನ ಇಲಾಖೆಯೊ ಸಂಪರ್ಕ ಹೊಂದುವುದರೊಂದಿಗೆ ಮಳೆಯ ತೀವ್ರತೆ ಮಾಹಿತಿ ಪಡೆಯಬೇಕೆಂದ ಅವರು, ಜಿಲ್ಲಾ ಮಟ್ಟದ ಅಧಿಕಾರಿಗಳು ರಜೆಯ ಮೇಲೆ ಹೋಗದೆ ಕೇಂದ್ರ ಸ್ಥಾನದಲ್ಲಿರಬೇಕೆಂದು ಸೂಚನೆ ನೀಡಿದರು.
ಸಾರ್ವಜನಿಕ ಆಸ್ತಿಗಳ ಸರ್ವೇ: ಕೆರೆ, ಸ್ಮಶಾನ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಅತಿಕ್ರಮಣವಾಗಿರುವುದನ್ನು ಸರ್ವೇ ಕಾರ್ಯದಿಂದ ಗುರುತಿಸಿ ಬೌಂಡರಿಗಳನ್ನು ನಿಗದಿಪಡಿಸುವುದರೊಂದಿಗೆ ಟ್ರೆಂಚ್ ತೆಗೆಸಬೇಕೆಂದ ಅವರು, ಕೆರೆಗಳ ಮಾಹಿತಿ ವೈಬ್‌ಸೈಟಲ್ಲಿ ಅಳವಡಿಸಲು ಕ್ರಮಕೈಗೊಳ್ಳ ಬೇಕೆಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ, ಅನುರಾಧ, ತಾಲೂಕು ತಹಸೀಲ್ದಾರ್, ಜಿಪಂ ಅಧಿಕಾರಿಗಳು ಹಾಗೂ ಇತರೇ ಅಧಿಕಾರಿಗಳು ಉಪಸ್ಥಿತರಿದ್ದರು.